ಅಪ್ಪು ಕನಸಿನ ಪ್ರಾಜೆಕ್ಟ್ ‘ಗಂಧದ ಗುಡಿ’ ಟೀಸರ್ ಅನಾವರಣ
ಪುನೀತ್ ರಾಜ್ಕುಮಾರ್ ಅವರು ಕರುನಾಡಿನ ಪ್ರಕೃತಿ ಸೌಂದರ್ಯದ ಬಗ್ಗೆ ಒಂದು ವಿಶೇಷ ಡಾಕ್ಯುಮೆಂಟರಿ ಮಾಡಿದ್ದಾರೆ. ಅದರ ಬಗ್ಗೆ ಅವರು ಹೆಚ್ಚು ಕಾಳಜಿ ಮತ್ತು ಭರವಸೆ ಇಟ್ಟುಕೊಂಡಿದ್ದರು. ನ.1ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅದರ ಟೈಟಲ್ ಟೀಸರ್ ಲಾಂಚ್ ಮಾಡಬೇಕು ಎಂಬುದು ಅವರ ಉದ್ದೇಶ ಆಗಿತ್ತು. ಆದರೆ ಅದಕ್ಕೂ ಮುನ್ನವೇ ಅವರು ನಿಧನರಾಗಿದ್ದು ತೀವ್ರ ನೋವಿನ ಸಂಗತಿ. ಇಂದು (ಡಿ.6) ಆ ಸಾಕ್ಷ್ಯಚಿತ್ರದ ಶೀರ್ಷಿಕೆ ಟೀಸರ್ ಅನಾವರಣಗೊಂಡಿದೆ.
ಪುನೀತ್ ರಾಜ್ಕುಮಾರ್ ಅವರು ಕರುನಾಡಿನ ಪ್ರಕೃತಿ ಸೌಂದರ್ಯ ಮತ್ತು ವನ್ಯಜೀವಿಗಳ ಕುರಿತ ಸಾಕ್ಷ್ಯಚಿತ್ರದ ನಿರ್ಮಾಣದಲ್ಲಿ ಅಪಾರ ಆಸಕ್ತಿ ತೋರಿಸಿದ್ದರು. ಆದರೆ ಅದನ್ನು ಅಭಿಮಾನಿಗಳ ಮುಂದಿಡುವ ಮುನ್ನವೇ ಅವರು ಅಸುನೀಗಿದ್ದು ನೋವಿನ ಸಂಗತಿ. ಭೌತಿಕವಾಗಿ ಅವರ ಅನುಪಸ್ಥಿತಿಯಲ್ಲೇ ಇಂದು (ಡಿ.6) ‘ಗಂಧದ ಗುಡಿ’ ಡಾಕ್ಯುಮೆಂಟರಿಯ ಶೀರ್ಷಿಕೆ ಟೀಸರ್ ಅನಾವರಣ ಆಗಿದೆ. ಪುನೀತ್ ರಾಜ್ಕುಮಾರ್ ಅವರ ‘ಪಿಆರ್ಕೆ ಆಡಿಯೋ’ ಮೂಲಕ ಟೈಟಲ್ ಟೀಸರ್ ರಿಲೀಸ್ ಮಾಡಲಾಗಿದೆ. ಈ ದಿನಕ್ಕಾಗಿ ಅಪ್ಪು ಅಭಿಮಾನಿಗಳು ಕಾತರದಿಂದ ಕಾದಿದ್ದರು. ಟೈಟಲ್ ಟೀಸರ್ ನೋಡಿ ಎಲ್ಲರೂ ಖುಷಿಪಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗುತ್ತಿದೆ. ಈ ವೇಳೆ ಅಪ್ಪು ನಮ್ಮೊಂದಿಗೆ ಇರಬೇಕಿತ್ತು ಎಂದು ಎಲ್ಲರೂ ತೀವ್ರವಾಗಿ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
****