ಜುಲೈ 30 ಕ್ಕೆ ‘ಸ್ಪೈಡರ್ ಮ್ಯಾನ್ – ದಿ ಬ್ರಾಂಡ್ ನ್ಯೂ ಡೇ’
‘ಸ್ಪೈಡರ್ ಮ್ಯಾನ್ – ದಿ ಬ್ರಾಂಡ್ ನ್ಯೂ ಡೇ’ ಸಿನಿಮಾವು ಜುಲೈ 30ರಂದು ವಿಶ್ವದಾದ್ಯಂತ ಬಿಡುಗಡೆ ಕಾಣಲಿದೆ. ಈ ಸಿನಿಮಾ ‘ಸ್ಪೈಡರ್ ಮ್ಯಾನ್ – ನೋ ವೇ ಹೊಂ’ ನ ಮುಂದುವರೆದ ಭಾಗವಾಗಿದೆ. ಈಗಾಗಲೇ ಸಿನಿಮಾದ ಕೊನೆ ಹಂತದ ಟ್ರೈಲರ್ ಬಿಡುಗಡೆಯಾಗಿದ್ದು ಟ್ರೈಲರ್ ಬಹಳಷ್ಟು ಸದ್ದು ಮಾಡುತ್ತಿದೆ.
ಇದೀಗ ಇದರ ನಡುವೆ ಈ ಸಿನಿಮಾದ ಕುರಿತು ಕೆಲವೊಂದಷ್ಟು ಮಾಹಿತಿಗಳನ್ನು ಚಿತ್ರತಂಡ ತೆರೆದಿಟ್ಟಿದೆ. ಈ ಭಾಗವು ಸ್ಪೈಡರ್ ಮ್ಯಾನ್ ಗೆ ಒಂದು ರೀತಿಯ ಹೊಸ ಆರಂಭವಾಗಿದ್ದು, ಆತ ಜಗತ್ತಿನಲ್ಲಿ ನಡೆಯುತ್ತಿರುವ ಅಪರಾಧಗಳ ವಿರುದ್ಧ ಹೋರಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾನೆ ಜೊತೆಗೆ ಇನ್ನೊಂದು ಕಡೆ ಅವನ ಹಳೆಯ ಸ್ನೇಹಿತರೆಲ್ಲರೂ ಆತನಿಲ್ಲದೆ ಅವರವರ ಜೀವನವನ್ನು ಮುಂದೆ ಸಾಗಿಸುತ್ತಿರುತ್ತಾರೆ.ಇದರ ನಡುವೆ ನಗರಕ್ಕೆ ಎದುರಾಗುವ ಕಣ್ಣಿಗೆ ಕಾಣದಿರುವ ಶಕ್ತಿಶಾಲಿ ಖಳನಾಯಕನ ಬೆದರಿಕೆಯನ್ನು ಸ್ಪೈಡರ್ ಮ್ಯಾನ್ ತಡೆಯಬೇಕಿದೆ .ಇಡೀ ಪ್ರಪಂಚವೇ ಆತನನ್ನು ಮರೆತಿದ್ದರು, ಸ್ಪೈಡರ್ ಮ್ಯಾನ್ ಮಾತ್ರ ಯಾವತ್ತೂ ತನ್ನವರನ್ನು ಮತ್ತು ಜಗತ್ತನ್ನು ಎಂದಿಗೂ ಮರೆತಿಲ್ಲ ಎನ್ನುವುದೇ ಚಿತ್ರದ ಎಳೆಯಾಗಿದೆ.
ದೊಡ್ಡ ತಾರಬಳಗ
ಈ ಚಿತ್ರವನ್ನು ‘ಶ್ಯಾಂಗ್-ಚಿ’ ಪ್ರಖ್ಯಾತಿಯ ಡೆಸ್ಟಿನ್ ಡೇನಿಯಲ್ ನಿರ್ದೇಶನ ಮಾಡುತ್ತಿದ್ದು, ನಟ ಟಾಮ್ ಹಾಲೆಂಡ್ ಪೀಟರ್ ಪಾರ್ಕರ್ & ಸ್ಪೈಡರ್ ಮ್ಯಾನ್ ಆಗಿ ಮತ್ತೆ ಮಿಂಚಲು ಸಿದ್ದವಾಗಿದ್ದಾರೆ.ಇವರ ಜೊತೆಗೆ ಝೆಂಡಾಯಾ,ಸ್ಯಾಡಿ ಸಿಂಕ್,ಜಾಕೋಬ್ ಬಟಾಲನ್, ಜಾನ್ ಬರ್ನ್ಡಾಲ್,ಟ್ರಾಮೆಲ್ ಟಿಲ್ಮನ್, ಮೈಕೆಲ್ ಮಾಂಡೋ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈಗಾಗಲೇ ಚಿತ್ರದ ಬಗ್ಗೆ ಅಭಿಮಾನಿಗಳು ಕುತೂಹಲವಾಗಿದ್ದು, ಜುಲೈ 30ಕ್ಕೆ ಪ್ರಪಂಚದಾದ್ಯಂತ ಇಂಗ್ಲಿಷ್ ಭಾಷೆ ಸೇರಿದಂತೆ ಕನ್ನಡ ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆ ಕಾಣಲಿದೆ.