ʼಕʼ ಪಿಚ್ಚರ್ ಕಂಡಂತೆ ʼತೀರ್ಥರೂಪ ತಂದೆಯವರಿಗೆʼ…
ತೀರ್ಥರೂಪ ತಂದೆಯವರಿಗೆ…
ಎದೆಭಾರವಾಗಿಸಿದ… ಸಿನಿಮಾ. ಈ ಸಿನ್ಮಾ ನೋಡಿ ಹೊರಬಂದ ಮೇಲೆ ಸತತವಾಗಿ ಕಾಡುತ್ತಿರುವ ಅಪ್ಪನ ಜವಾಬ್ದಾರಿ.. ಅಮ್ಮನ ದಿಟ್ಟತನ… ಮತ್ತು ಅಮ್ಮನ ಪಾತ್ರ ಸೀತಾರ ಹೇಳುವ ಕೊನೆಯ ‘ಡೈಲಾಗ್’
“ಇರುವ ಭಾಗ್ಯವ ನೆನೆದು..
ಬಾರೆನೆಂಬುವುದನ್ನು ಬಿಡು
ಹರುಷಕ್ಕಿದೇ ದಾರಿ”- ಡಿವಿಜಿ
ಡಿವಿಜಿಯವರ ಈ ಸಾಲೇ ಈ ಚಿತ್ರದ ತಿರುಳು… ಕುವೆಂಪುರವರ ಪ್ರಕೃತಿ ತತ್ವ… ತೇಜಸ್ವಿಯವರ ಬದುಕಿನ ನೀತಿಯನ್ನ ಮೇಳಸಿದ ಲೇಪ ಈ ಚಿತ್ರದ ಸೊಗಡು..
ನಿರ್ದೇಶಕ ರಾಮೇನಹಳ್ಳಿ ಜಗನ್ನಾಥರ
ಕ್ಲಾಸ್ ನಿರೂಪಣೆಯಲ್ಲಿನ ಹುಡುಕಾಟದಲ್ಲಿ, ಪ್ರೇಕ್ಷಕನ ತಲ್ಲೀನಗೊಳಿಸಿ, ಅದೇ ಉನ್ಮಾದದಲ್ಲಿ ಪಯಣಿಸುವಲ್ಲಿ ಯಶಸ್ವಿಯಾಗಿದ್ದಾರೆ…
ಇಪ್ಪತ್ಮೂರು ವರ್ಷಗಳ ಹಿಂದೆ ಮೈಸೂರು ಮಲ್ಲಿಗೆ ಅನ್ನೋ ಒಂದು ವಿಡಿಯೋ ಸೃಷ್ಟಿಸಿದ್ದ ಸಂಚಲನ ನೆನೆಪಿರೋರಿಗೆ… ಈ ಸಿನಿಮಾ ನೋಡಿದಾಗ,ಆ ವಿಡಿಯೋದಿಂದಾದ ಪರಿಣಾಮ… ಒಂದು ಪತ್ರಿಕೆಯ ಆತುರದ ಸುದ್ಧಿ….ಒಂದು ಕುಟುಂಬವೇ ದಿಕ್ಕಾಪಾಲಾಗೋ ‘ಸ್ಥಿತಿ’ಯ ಕಲ್ಪನೆ.. ಹಾಗೂ ಸಾಮಾಜಿಕ ‘ಮಾಧ್ಯಮ’ದ ಸರಿ ತಪ್ಪುಗಳ ಬಣ್ಣನೆಯನ್ನ ಜಗನ್ನಾಥ ನಾಜೂಕಾಗಿ ನಿರೂಪಿಸಿದ್ದಾರೆ.
ಇಡೀ ಸಿನಿಮಾ ರವೀಂದ್ರ ವಿಜಯ್ & ಸಿತಾರ ಇಬ್ಬರು ಅಪ್ಪ ಅಮ್ಮನಾಗಿ ಪ್ರಬುದ್ಧವಾಗಿ ಕಾಣ್ತಾರೆ.. ಪ್ರಕಾಶ್ ರಾಜ್ ರವರು ಆಳಿದಂತೆ ಇಡೀ ಭಾರತೀಯ ಚಿತ್ರರಂಗವನ್ನ ಆಳುವ ಸಾಮರ್ಥ್ಯವಿರುವ ಕಲಾವಿದ ರವೀಂದ್ರ ವಿಜಯ್ ಈ ಸಿನಿಮಾದ ಮುಖ್ಯ ಆಧಾರ.. ಇವನ್ನ ಕನ್ನಡ ಚಿತ್ರರಂಗ ಹೆಚ್ಚು ಬಳಸಿಕೊಳ್ಳಲಿ…
ನಿಹಾರ್ ಮುಖೇಶ್… ಚೊಚ್ಚಲ ಚಿತ್ರದಲ್ಲೇ ಭರವಸೆಯುತ ಪಾತ್ರ ನಿರ್ವಹಣೆ ಮಾಡಿದ್ದಾರೆ.. ನಟನಾಗಿ ಗಟ್ಟಿಯಾಗಿ ನೆಲೆ ನಿಲ್ಲುವ ಸಾಮರ್ಥ್ಯ ತೋರಿದ್ದಾರೆ… ರಚನಾ ಇಂದರ್ ಮುದ್ದಾಗಿ ಪೆದ್ದುಪೆದ್ದಾಗಿ ಇಷ್ಟವಾಗ್ತಾರೆ…ಕಂಬ್ಳಿ ಹುಳ ಅಶ್ವಿತಾ ಹೆಗ್ಗಡೆ, ಅಜಿತ್ ಹಂಡೆ, ರಾಜೇಶ್ ನಟರಂಗ, ಗಿರೀಶ್ ಶಿವಣ್ಣ,ಸ್ವಾತಿ, ಶ್ರೀವತ್ಸ ಸೇರಿ ಪ್ರತಿಪಾತ್ರವೂ ನೆನಪಲ್ಲಿ ಉಳಿಯುತ್ತೆ.
ಪ್ರಶಾಂತ್ ರಾಜಪ್ಪ ಸತ್ವಯುತ ಸಂಭಾಷಣೆ ಈ ಕಥೆಗೆ ಭೂಷಣ.. ಜೋಕೋಸ್ಟ ಸಂಗೀತ ಮತ್ತು ದೀಪಕ್ ಯರೇಗಾರ ಛಾಯಾಗ್ರಹಣ ಸೇರಿ ಇಡೀ ಚಿತ್ರದ ತಾಂತ್ರಿಕತೆ ಉತ್ಕೃಷ್ಟವಾಗಿದೆ.
ಕಣ್ಣಿಗೆ ತಂಪೆರೆದ ದೃಶ್ಯಕಾವ್ಯ… ಕಿವಿಗಿಂಪ್ಪುಕೊಟ್ಟ ಸಂಗೀತ.. ಮನಸಿನಾಳಕ್ಕಿಳಿದ ಸಾಹಿತ್ಯ… ಗಂಟಲುಬ್ಬಿಸುವ… ಗೊತ್ತಿಲ್ಲ ಕಣ್ಣೊದ್ದೆಯಾಗುವ…
ಎದೆಭಾರವಾಗಿಸುವ.. ಸಂಬಂಧಗಳ ಸೂಕ್ಷ್ಮಮತೆಯ ಆ ಸನ್ನಿವೇಶಗಳು… ನಮ್ಮ ಸಾಮಾಜಿಕ ಹೋರಾಟ ಮತ್ತು ಸಾಂಸಾರಿಕ ಪ್ರಜ್ಞೆಯನ್ನ ಎಚ್ಚರಿಸುತ್ತವೆ..
ತೀರ್ಥರೂಪ ತಂದೆಯವರಿಗೆ….
ಇದು ಪ್ರತಿಕುಟುಂಬದ ಕಥೆ… ಪ್ರತಿ ಕುಟುಂಬ ನೋಡಲೇಬೇಕಾದ ಸಿನಿಮಾ…ದಯವಿಟ್ಟು OTTಯವರೆಗೂ ಕಾಯಬೇಡಿ… ಮನೆಮಂದಿಯಲ್ಲಾ ಥಿಯೇಟರಿನಲ್ಲಿ ನೋಡಿ ಅನುಭವಿಸುವ ಸಿನಿಮಾ..