ಎ ಹರ್ಷ, ಶಿವರಾಜಕುಮಾರ್ ಅವರ ಕಾಂಬಿನೇಶನ ಭಜರಂಗಿ 2 ಚಿತ್ರ ಅಕ್ಟೋಬರ್ 29 ರಂದು ರಿಲೀಸ್ ಆಗಿತ್ತು. ಆದ್ರೆ ಅದೇ ದಿನ ಅಪ್ಪು ಸಾವನ್ನಪ್ಪಿದರು. ತಕ್ಷಣ ಸಿನಿಮಾ ಶೋ ನಿಲ್ಲಿಸಲಾಯಿತು. ಭಜರಂಗಿ 2 ಚಿತ್ರದ ಮೇಲೆ ಭಾರಿ ನಿರೀಕ್ಷೆ ಕೂಡ ಚಿತ್ರತಂಡಕ್ಕಿತ್ತು, ಈ ಘಟನೆಯಿಂದ ಚಿತ್ರ ತಂಡವೂ ಕೂಡ ಕುಗ್ಗಿ ಹೋಗಿತ್ತು, ಮತ್ತೆ ಚಿತ್ರಪ್ರದರ್ಶನ ಪ್ರಾರಂಭವಾದರೂ ನಿರೀಕ್ಷಿತ ಪಲಿತಾಂಶ ಸಿಗಲಿಲ್ಲಾ. ಡಿಸೆಂಬರ್ 23ರಿಂದ ‘ಭಜರಂಗಿ 2’ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲಾಯಿತು. ಜೀ5ನಲ್ಲಿ (Zee5) ತೆರೆಕಂಡ ಚಿತ್ರವನ್ನು ಕನ್ನಡ ಚಿತ್ರಪ್ರೇಮಿಗಳು ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಇದರ ಪರಿಣಾಮ, ಚಿತ್ರ ಕೇವಲ ಮೂರೇ ದಿನದಲ್ಲಿ ಹಿಂದಿನ ದಾಖಲೆಗಳನ್ನು ಮುರಿದಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಭಜರಂಗಿ 2’ ಸೃಷ್ಟಿಸಿದ ಹೊಸ ದಾಖಲೆ
ಜೀ5ನಲ್ಲಿ ತೆರೆಕಂಡಿರುವ ‘ಭಜರಂಗಿ 2’ ಬಿಡುಗಡೆಯಾದ ಕೇವಲ ಮೂರು ದಿನದಲ್ಲಿ ಬರೋಬ್ಬರಿ 5 ಕೋಟಿ ನಿಮಿಷಗಳ ವೀಕ್ಷಣೆ ಪಡೆದಿದೆ. ಓಟಿಟಿಯಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಬೃಹತ್ ವೀಕ್ಷಣೆ ಪಡೆದ ಮೊದಲ ಕನ್ನಡ ಚಿತ್ರ ಇದಾಗಿದ್ದು, ದಾಖಲೆ ಬರೆದಿದೆ. ಇದು ಚಿತ್ರತಂಡ ಹಾಗೂ ಶಿವರಾಜ್ಕುಮಾರ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಜೀ5 ಈ ಕುರಿತು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದೆ. ಅಲ್ಲದೇ ವೀಕ್ಷಕರಿಗೆ ಧನ್ಯವಾದ ಸಲ್ಲಿಸಿದೆ.
ಚಿತ್ರದಲ್ಲಿ ಭಾವನಾ ಮೆನನ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಭಜರಂಗಿ ಲೋಕಿ, ಶ್ರುತಿ, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಖ್ಯಾತ ನಿರ್ಮಾಪಕರಾದ ಜಯಣ್ಣ-ಭೋಗೇಂದ್ರ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.
****