ಪುನೀತ್ ರಾಜ್‍ಕುಮಾರ್ ದೈಹಿಕವಾಗಿ ಇಂದು ನಮ್ಮ ಜೊತೆ ಇಲ್ಲ. ಅವರು ನಮ್ಮನ್ನು ಅಗಲಿ ಒಂದೂವರೆ ತಿಂಗಳು ಕಳೆದಿದೆ. ಆದರೆ ಇಡೀ ಕರ್ನಾಟಕಕ್ಕೆ ಆವರಿಸಿರುವ ಸೂತಕ ಮಾತ್ರ ಹಾಗಯೇ ಇದೆ. ಎಷ್ಟೆ ಆದರೂ ಯಾರ ಮಗ ಹೇಳಿ.. ಡಾ.ರಾಜ್‍ಕುಮಾರ್ ಅವರ ತೃತೀಯ ಪುತ್ರ ಪವರ್ ಸ್ಟಾರ್ ಅಪ್ಪನ ಹಾಗೇ ಅಪ್ಪು ಬದುಕಿದರೇ ಹೀಗೆ ಬದುಕಬೇಕು ಎಂದು ಎಲ್ಲರಿಗೂ ತೋರಿಸಿ ಇಹಲೋಕ ತ್ಯಜಿಸಿದ್ದಾರೆ. ಅಪ್ಪು ಇಲ್ಲ ಎಂಬ ಕಹಿ ಸತ್ಯವನ್ನು ಎಲ್ಲರೂ ಒಪ್ಪಿಕೊಂಡು ಹೋಗಬೇಕು. ಅವರು ಮಾಡುತ್ತಿದ್ದ ಕೆಲಸಗಳನ್ನು ಅವರ ಅಭಿಮಾನಿಗಳು ಅಳವಡಿಸಿಕೊಂಡಿದ್ದಾರೆ.
ಪುನೀತ್ ರಾಜ್‍ಕುಮಾರ್ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಹಲವು ರಸ್ತೆಗಳಿಗೆ ಹಾಗೂ ಪಾರ್ಕ್ಗೆ ಪುನೀತ್ ಹೆಸರನ್ನು ಇಡುವ ಕೆಲಸ ನಡೆದಿದೆ. ಅದೇ ರೀತಿ ಪುನೀತ್ ರಾಜ್‍ಕುಮಾರ್ ಅವರ ಸವಿನೆನಪಿಗಾಗಿ ಶಿವಮೊಗ್ಗ ಜಿಲ್ಲೆಯ, ಹೊಸನಗರ ತಾಲೂಕಿನ ಸಾಗರ ರಸ್ತೆಯಲ್ಲಿನ ಕುಕ್ಕಳಲೆ ಗ್ರಾಮದ ಸಂಪರ್ಕ ರಸ್ತೆಗೆ ಊರಿನ ಗ್ರಾಮಸ್ಥರು ಹಾಗೂ ಕನ್ನಡಪರ ಸಂಘಟನೆಯವರು ಪುನೀತ್ ರಾಜ್‍ಕುಮಾರ್ ರಸ್ತೆ ಎಂದು ನಾಮಕರಣ ಮಾಡಿದ್ದರು. ಡಿಸೆಂಬರ್ 23ರ ತಡರಾತ್ರಿ ಕೆಲವು ಕಿಡಿಗೇಡಿಗಳು ಆ ನಾಮಫಲಕಕ್ಕೆ ಬಿಳಿ ಬಣ್ಣವನ್ನು ಹಚ್ಚಿದ್ದಾರೆ.
ಊರಿನ ರಸ್ತೆಗೆ ಇಟ್ಟಿದ್ದ ಪುನೀತ್ ರಾಜ್‍ಕುಮಾರ್ ಹೆಸರಿಗೆ ಕಿಡಿಗೇಡಿಗಳು ಅವಮಾನ ಮಾಡಿದ್ದಾರೆ. ನಾಮಫಲಕದಲ್ಲಿ ಬರೆದಿರುವ ಪುನೀತ್ ರಾಜ್‍ಕುಮಾರ್ ರಸ್ತೆಯ ಹೆಸರನ್ನು ಅಳಸಿ ಅವಮಾನ ಎಸಗಿದ್ದಾರೆ. ನಾಮಫಲಕಕ್ಕೆ ಬಿಳಿ ಬಣ್ಣ ಹಚ್ಚಿ ಅವಮಾನ ಮಾಡಿರುವವರ ವಿರುದ್ಧ ಕನ್ನಡಪರ ಸಂಘಟನೆಗಳು ಮತ್ತು ಊರಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪ್ಪು ಅವರ ಅಭಿಮಾನಿಗಳಂತೂ ಆ ಕಿಡಿಗೇಡಿಗಳು ನಮ್ಮ ಕೈಯಲ್ಲಿ ಸಿಕ್ಕರೆ ಕಂಡಿತ ಸುಮ್ಮನೆ ಬಿಡುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.