‘ಪದಕ’ ಚಿತ್ರದ ಟ್ರೈಲರ್‌ ರಿಲೀಸ್

ಮಕ್ಕಳ ಶೌರ್ಯವನ್ನು ಗುರುತಿಸಿ ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ (ಐಸಿಸಿಡಬ್ಲ್ಯು) ನೀಡುವ ಶೌರ್ಯ ಪ್ರಶಸ್ತಿಯ ಹಿಂದಿನ ನೂರಾರು ಘಟನೆಗಳಲ್ಲಿ ನಾಲ್ಕು ನೈಜ ಘಟನೆಗಳನ್ನು ಆಧರಿಸಿ ಮೈಸೂರಿನ ತಂಡ ನಿರ್ಮಿಸಿದ ‘ಪದಕ’ ಪ್ರಶಸ್ತಿ ವಿಜೇತ ಮಕ್ಕಳ ಚಿತ್ರದ ಟ್ರೈಲರ್‌ನ್ನು ಮೈಸೂರಿನ ಕೆಎಸ್‌ಒಯು ಕಾವೇರಿ ಸಭಾಂಗಣದಲ್ಲಿ ಭಾನುವಾರ ಬಿಡುಗಡೆ ಮಾಡಲಾಯಿತು.

ಟ್ರೈಲರ್ ಬಿಡುಗಡೆ ಮಾಡಿದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ಪೋಷಕರು’ ಮಕ್ಕಳ ಆಸಕ್ತಿ, ಪ್ರತಿಭೆಯನ್ನು ಗುರುತಿಸಿ ಆ ನಿಟ್ಟಿನಲ್ಲಿ ಸಾಧನೆ ಮಾಡಲು ಪ್ರೋತ್ಸಾಹಿಸಬೇಕು. ಆದರೆ ನಾವು ಬಯಸಿದಂತೆ ನಮ್ಮ ಮಕ್ಕಳು ಆಗಬೇಕು ಎಂಬುದು ತಪ್ಪು ಹಾಗೆ ಮಾಡಬೇಡಿ’ ಎಂದು ಮಕ್ಕಳ ತಂದೆ ತಾಯಿಗೆ ಕಿವಿಮಾತು ಹೇಳಿದರು.‘ಮಕ್ಕಳು ಈ ಚಿತ್ರವನ್ನು ನೋಡಿ ಪ್ರೇರಣೆಗೊಂಡು ಸಾಧನೆಯ ಹಾದಿಯಲ್ಲಿ ಸಾಗಲಿ ಎಂಬುದು ಪದಕ ಚಿತ್ರತಂಡ ಉದ್ದೇಶವಾಗಿದೆ. ಶಾಲಾ ಮಕ್ಕಳು ಅದನ್ನು ನೋಡಲಿ, ಅದರಲ್ಲಿ ಏನಿದೆ ಎಂಬುದು ಎಲ್ಲರ ಕುತೂಹಲವೂ ಆಗಿದೆ’ ಎಂದರು.

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿನಲ್ಲಿ ‘ಎಆರ್‌ಸಿ’ ಎಂಟರ್‌ಟೈನ್‌ಮೆಂಟ್ ಅರ್ಪಿಸುವ ಪದಕ ಚಲನಚಿತ್ರದ ಕಥೆ, ಸಂಭಾಷಣೆ, ನಿರ್ಮಾಣ ಮತ್ತು ನಿರ್ದೇಶನ ಎಲ್ಲವನ್ನು ಮೈಸೂರಿನ ಆದಿತ್ಯ ಆರ್. ಚಿರಂಜೀವಿ ಅವರೇ ನಿಭಾಯಿಸಿದ್ದಾರೆ.ಉರುವಟ್ಟಿ ಇಂಟರ್‌ ನ್ಯಾಷನಲ್ ಫಿಲಂ ಫೇರ್ ಅವಾರ್ಡ್, ಬೆಟ್ಟಯ್ಯ ಫಿಲಂ ಫೇರ್ ಅವಾರ್ಡ್, ರಾಮೇಶ್ವರಂ ಫಿಲಂ ಫೇರ್ ಅವಾರ್ಡ್, ಬ್ಲ್ಯಾಕ್ ಸ್ಪಿಯರ್, ವರ್ಜಿನ್ ಸ್ಪ್ರಿಂಗ್ ಕೋಲ್ಕತ್ತ ಹೀಗೆ 40ಕ್ಕೂ ಹೆಚ್ಚು ಪ್ರಶಸ್ತಿಗಳು ದೊರೆತಿವೆ. ರಾಜ್ಯ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ’ ಎಂದು ಆದಿತ್ಯ ಚಿರಂಜೀವಿ ಹೇಳಿದರು.

ತಾರಾಬಳಗದಲ್ಲಿ ಡ್ರಾಮಾ ಜೂನಿಯರ್ಸ್‌ ಖ್ಯಾತಿಯ ಮಹೇಂದ್ರ, ತುಷಾರ್ ಹಾಗೂ ಅಮಿತ್, ಕೆಜಿಎಫ್‌ ಸಿನಿಮಾ ಖ್ಯಾತಿಯ ಅನ್‌ಮೋಲ್, ಕಾರ್ನಿಕಾ ನಾಯಕ್, ಸ್ಕಂದ ತೇಜಸ್, ಮಂಜುಳಾ ರೆಡ್ಡಿ, ಕಿಲ್ಲರ್ ವೆಂಕಟೇಶ್, ಕೆ.ಎಸ್. ಶ್ರೀಧರ್, ಸುರೇಶ್ ಉದ್ಬೂರ ಇದ್ದಾರೆ.

Exit mobile version