ಡಿಂಪಲ್ ಕ್ವೀನ್ ರಚಿತಾ ರಾಮ್ ರನ್ನ ಅಭಿಮಾನಿಗಳು ಪ್ರೀತಿಯಿಂದ ‘ರಚ್ಚು’ ಅಂತ ಕರೀತ್ತಾರೆ. ಇದೀಗ ಅದನ್ನೇ ಟೈಟಲ್ ಮಾಡಿಕೊಂಡು ಸಿನಿಮಾ ಒಂದು ಸೆಟ್ಟೇರ್ತಾ ಇದೆ. ಈ ಪಿಚ್ಚರ್ ನಲ್ಲಿ ಮೊದಲ ಬಾರಿಗೆ ಕೃಷ್ಣ ಅಜಯ್ ರಾವ್ ಜೊತೆ ರಚಿತಾ ರಾಮ್ ಜೋಡಿಯಾಗಿದ್ದಾರೆ. ಈ ಹೊಸ ಕಾಲದ ಲವ್ ಸ್ಟೋರಿಗೆ, ಹೊಸ ಪ್ರತಿಭೆ ಶಶಾಂಕ್ ರಾಜ್ ನಿರ್ದೇಶಕರು. ಈ ಪಿಚ್ಚರ್ ಅನ್ನ ಗುರು ದೇಶಪಾಂಡೆ. ಜಿ ಸಿನಿಮಾಸ್ ಪ್ರೊಡಕ್ಷನ್ ಮೂಲಕ ‘ಐ ಲವ್ ಯೂ ರಚ್ಚು’ ನಿರ್ಮಾಣ ಆಗಲಿದೆ. ಉಳಿದಂತೆ ತಾಂತ್ರಿಕ ಬಳಗದಲ್ಲಿ ಯಾರೆಲ್ಲ ಇದ್ದಾರೆ? ಕಲಾವಿದರು ಯಾರು ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ!
ಇದು ನಿರ್ದೇಶಕ ಶಶಾಂಕ್ ಬರೆದ ಕಥೆಯೇ?
ಕೆಲ ದಿನಗಳ ಹಿಂದಷ್ಟೇ ಒಂದು ನ್ಯೂಸ್ ಬಹಿರಂಗವಾಗಿತ್ತು. ಅದೇನೆಂದರೆ, ‘ಕೃಷ್ಣನ್ ಲವ್ ಸ್ಟೋರಿ’ ಖ್ಯಾತಿಯ ಶಶಾಂಕ್ ಒಂದು ಕಥೆ ಬರೆದಿದ್ದು, ಅದರಲ್ಲಿ ಅಜಯ್ ರಾವ್ ಹೀರೋ ಆಗಿರಲಿದ್ದಾರೆ. ಗುರು ದೇಶಪಾಂಡೆ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗಿತ್ತು. ‘ಈ ಸಿನಿಮಾದ ಕಥೆಯೇ ವಿಶೇಷವಾಗಿದೆ. ಈ ಹೊತ್ತಿಗೆ ಹೇಳಿ ಮಾಡಿಸಿದ ಸ್ಟೋರಿ ಇದು. ಹಾಗಾಗಿ, ನನ್ನ ಮತ್ತು ಅಜಯ್ ರಾವ್ ಕಾಂಬಿನೇಷನ್‌ನ ‘ರೆನ್ ಬೋ’ ಚಿತ್ರವನ್ನು ಮುಂದಕ್ಕೆ ಹಾಕಿ, ಈ ಸಿನಿಮಾವನ್ನು ಶುರು ಮಾಡಿದ್ದೇವೆ. ಇದರ ಮತ್ತೊಂದು ವಿಶೇಷವೆಂದರೆ, ಶಶಾಂಕ್ ಅವರು ಕಥೆ ಬರೆದಿರುವುದು. ಅಜಯ್ ರಾವ್ ಮತ್ತು ಶಶಾಂಕ್ ಅವರದ್ದು ಯಶಸ್ವಿ ಜೋಡಿ. ‘ಕೃಷ್ಣ’ ಸರಣಿ ಇಲ್ಲಿಯೂ ಮುಂದುವರೆದಿದೆ. ಈ ಸಿನಿಮಾದ ಮೂಲಕ ಹೊಸ ನಿರ್ದೇಶಕರು ಸಿನಿಮಾರಂಗಕ್ಕೆ ಪರಿಚಯ ಆಗುತ್ತಿದ್ದಾರೆ’ ಎಂದಿದ್ದರು ಗುರು. ಈಗ ಕೇಳಿಬರುತ್ತಿರುವ ‘ಐ ಲವ್ ಯೂ ರಚ್ಚು’, ಅದೇ ಸಿನಿಮಾ ಇರಬಹುದಾ ಎಂಬ ಚರ್ಚೆ ಶುರುವಾಗಿದೆ.