ಅಪ್ಪುಗಾಗಿ ಹಾಡು ಹಾಡಿದ ಎನ್ ಟಿ ಆರ್
ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡ ಕನ್ನಡ ನಾಡು ಬಡವಾಗಿದೆ. ಅವರು ಇಲ್ಲ ಎನ್ನುವ ವಿಚಾರವನ್ನು ಅರಗಿಸಿಕೊಳ್ಳೋಕೆ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಕರ್ನಾಟಕ ಅದರಲ್ಲೂ ಚಿತ್ರರಂಗ ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದೆ. ಅವರನ್ನು ನೆನಪಿಸಿಕೊಳ್ಳುವ ಕೆಲಸ ಎಲ್ಲ ಕಡೆಗಳಲ್ಲೂ ಆಗುತ್ತಿದೆ. ಪ್ರತಿ ಸುದ್ದಿಗೋಷ್ಠಿಯಲ್ಲಿ ಪುನೀತ್ ಅವರ ಸಾಧನೆಯನ್ನು ಸ್ಮರಿಸಲಾಗುತ್ತಿದೆ. ಪರಭಾಷೆಯ ಸ್ಟಾರ್ಗಳು ಕೂಡ ಪುನೀತ್ ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇಂದು (ಡಿಸೆಂಬರ್ 10) ‘ಆರ್ಆರ್ಆರ್’ ಸುದ್ದಿಗೋಷ್ಠಿ ಬೆಂಗಳೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲೂ ಅಪ್ಪು ಅವರನ್ನು ನೆನೆಯಲಾಯಿತು.
‘ಆರ್ ಆರ್ ಆರ್’ ಚಿತ್ರದ ಪ್ರಚಾರಕ್ಕಾಗಿ ನಿರ್ದೇಶಕ ಎಸ್.ಎಸ್. ರಾಜಮೌಳಿ, ನಟಿ ಆಲಿಯಾ ಭಟ್, ನಟ ರಾಮ್ ಚರಣ್ ಹಾಗೂ ಜ್ಯೂ.ಎನ್ಟಿಆರ್ ಬೆಂಗಳೂರಿಗೆ ಆಗಮಿಸಿದ್ದರು. ಕರ್ನಾಟಕದ ಜನರನ್ನು ಉದ್ದೇಶಿಸಿ ಅವರೆಲ್ಲರೂ ಮಾತನಾಡಿದರು. ಈ ವೇಳೆ ಅಪ್ಪು ಬಗ್ಗೆ ಮಾತನಾಡುತ್ತಾ ಜ್ಯೂ.ಎನ್ಟಿಆರ್ ಭಾವುಕರಾದರು. ಅವರಿಗೋಸ್ಕರ ವಿಶೇಷ ಹಾಡು ಕೂಡ ಹಾಡಿದರು.
ಎನ್ ಟಿ ಆರ್ ಕುಟುಂಬಕ್ಕೂ ರಾಜ್ ಕುಟುಂಬಕ್ಕೂ ಒಂದು ಆಪ್ತತೆ ಇದೆ. ಅಪ್ಪು ಜತೆಗೆ ಜ್ಯೂ. ಎನ್ಟಿಆರ್ ಅವರು ಒಳ್ಳೆಯ ಫ್ರೆಂಡ್ ಶಿಪ್ ಹೊಂದಿದ್ದರು. ಪುನೀತ್ ಅವರನ್ನು ಕಳೆದುಕೊಂಡಿರುವ ಸತ್ಯವನ್ನು ಜ್ಯೂ.ಎನ್ ಟಿ ಆರ್ಗೆ ಈಗಲೂ ಒಪ್ಪೋಕೆ ಆಗುತ್ತಿಲ್ಲ. ಹೀಗಾಗಿ, ಅವರು ತುಂಬಾನೇ ಬೇಸರ ಮಾಡಿಕೊಂಡರು.
‘ಪುನೀತ್ ಇಲ್ಲದ ಕರ್ನಾಟಕ ನನಗೆ ಶೂನ್ಯವಾಗಿ ಕಾಣುತ್ತಿದೆ. ಅವರು ಎಲ್ಲೇ ಇದ್ದರೂ ಅವರ ಆಶೀರ್ವಾದ ನನ್ನ ಮೇಲಿರುತ್ತೆ. ನಾನು ಈ ಹಾಡನ್ನು ಪುನೀತ್ ಗಾಗಿ ಎಂದಿಗೂ ಹೇಳಿರಲಿಲ್ಲ. ಇದೇ ಮೊದಲು, ಮತ್ತು ಕೊನೆ’ ಎಂದು ‘ಗೆಳೆಯ ನನ್ನ ಗೆಳೆಯ..’ ಹಾಡನ್ನು ಹಾಡಿದರು ಯಂಗ್ ಟೈಗರ್. ಈ ವೇಳೆ ಅವರು ತುಂಬಾನೇ ಭಾವುಕರಾಗಿದ್ದು ಕಂಡು ಬಂತು.
ಪುನೀತ್ ನಿಧನ ಹೊಂದಿದ ನಂತರದಲ್ಲಿ ಜ್ಯೂ.ಎನ್ ಟಿ ಆರ್ ಬೆಂಗಳೂರಿಗೆ ಆಗಮಿಸಿದ್ದರು. ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ಶಿವರಾಜ್ಕುಮಾರ್ಗೆ ಅವರಿಗೆ ಸಾಂತ್ವನ ಹೇಳುವ ಪ್ರಯತ್ನ ಮಾಡಿದ್ದರು. ಶಿವರಾಜ್ಕುಮಾರ್ ಅವರನ್ನು ಅಪ್ಪಿ ಜ್ಯೂ.ಎನ್ಟಿಆರ್ ಬಿಕ್ಕಿಬಿಕ್ಕಿ ಅತ್ತಿದ್ದರು ಕೂಡ. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಈಗ ಅವರು ಮತ್ತೆ ಕರ್ನಾಟಕಕ್ಕೆ ಬಂದು, ಇಲ್ಲಿ ಪುನೀತ್ ಅವರನ್ನು ನೆನೆದು ಭಾವುಕರಾಗಿದ್ದಾರೆ. ಇದು ಪುನೀತ್ ಹಾಗೂ ಜ್ಯೂ.ಎನ್ಟಿಆರ್ ನಡುವಿನ ಫ್ರೆಂಡ್ಶಿಪ್ ತೋರಿಸುತ್ತದೆ.
****