ಬೆಂಗಳೂರಿನ ಹೃದಯ ಭಾಗದಲ್ಲಿರುವ ಅಣ್ಣಮ್ಮ ದೇವಸ್ಥಾನದ ಪಕ್ಕದಲ್ಲಿರುವ ನವಯುಗ ಹೋಟೆಲ್ ಬಗ್ಗೆ ಬಾಗಶ: ಎಲ್ಲರಿಗೂ ಗೊತ್ತೇ ಇರುತ್ತದೆ..ಮೋಹನ್ ರಾವ್ ರವರ ಮಾಲೀಕತ್ವದಲ್ಲಿ 1981 ರಲ್ಲಿ ಶುರುವಾದ ಈ ನವಯುಗ ಹೋಟೆಲ್ ಹಿಂದೆ ಒಂದು ಇಂಟರೆಸ್ಟಿಂಗ್ ಕಥೆ ಇದೆ..
ಮೋಹನ್ ರಾವ್ ರವರು ವರನಟ,ಡಾ ರಾಜಕುಮಾರ್ ರವರ ಅಪ್ಪಟ ಅಭಿಮಾನಿ,ಅಣ್ಣಾವ್ರ ಎಲ್ಲ ಸಿನಿಮಾಗಳನ್ನು ಪರಮ ಭಕ್ತನಂತೆ ತಪ್ಪದೆ ನೋಡುತ್ತಲೇ ಅಣ್ಣಾವ್ರ ಅಧ್ಬುತ ವ್ಯಕ್ತಿತ್ವಕ್ಕೆ ಮಾರು ಹೋಗಿ,ಕಾಲ ಕಳೆದಂತೆ ರಾಜ್ ರವರ ಅತ್ಯಂತ ಆಪ್ತ ಒಡನಾಡಿಯಾಗಿ ಬೆಳೆದದ್ದು ಇತಿಹಾಸ..
ಇದರ ಮಧ್ಯ ಮೋಹನ್ ರಾವ್ ನವಯುಗ ಎಂಬ ಹೋಟೆಲ್ ಒಂದನ್ನ ಶುರು ಮಾಡುತ್ತಾರೆ,ಅದೇ ಸಮಯದಲ್ಲಿ ತಮ್ಮ ಆರಾಧ್ಯ ದೈವ ಅಣ್ಣಾವ್ರಿಗೆ ಮತ್ತು ಪಾರ್ವತಮ್ಮನವರಿಗೆ ಪ್ರೀತಿಯ ಆಹ್ವಾನ ನೀಡಿ, ನವಯುಗ ಹೋಟೆಲ್ ನಲ್ಲಿ ಸಿದ್ಧವಾದ ಅಡುಗೆಯನ್ನು ಬಡಿಸಿ ಊಟ ಮಾಡಿಸುತ್ತಾರೆ..
ಅಣ್ಣಾವ್ರು ಮತ್ತು ಪಾರ್ವತಮ್ಮನವರು ಬಹಳ ಖುಷಿಯಿಂದ ಊಟವನ್ನು ಮಾಡುತ್ತಾರೆ,ಅದೇ ಸಮಯದಲ್ಲಿ ಅಣ್ಣಾವ್ರು ಮೋಹನ್ ರಾವ್ ಅವ್ರಿಗೆ ಮತ್ತು ನವಯುಗಕ್ಕೆ ಹರಸಿ,ಆಶೀರ್ವಾದ ಮಾಡಿ ಹೋಗುತ್ತಾರೆ.1981 ರಿಂದ ಇವತ್ತಿನವರೆಗೂ ಅಣ್ಣಾವ್ರ ದೊಡ್ಮನೆ ಕುಟುಂಬಕ್ಕೆ,ವಜ್ರೇಶ್ವರಿ ಸಂಸ್ಥೆಗೆ ನವಯುಗ ಹೋಟೆಲ್ ಊಟ ಫಿಕ್ಸ್..
ಇದೆ ಮೋಹನ್ ರಾವ್ ಮುಂದಿನ ದಿನಗಳಲ್ಲಿ ಡಾ ರಾಜಕುಮಾರ್ ಮತ್ತು ಊರ್ವಶಿಯವರ ಶ್ರಾವಣ ಬಂತು ಸಿನಿಮಾಗೆ ನಿರ್ಮಾಪಕರಾಗಿ ಬಡ್ತಿ ಹೊಂದಿ ಮತ್ತಷ್ಟು ಎತ್ತರದ ಮಟ್ಟಕ್ಕೆ ಹೋಗಿದ್ದು,ಇನ್ನೊಂದು ಸಂಭ್ರಮದ ವಿಚಾರ..
ಆ ದಿನಗಳಲ್ಲಿ ನವಯುಗ ಹೋಟೆಲ್ ನ್ನ ಡಾ ರಾಜಕುಮಾರ್ ಹೋಟೆಲ್ ಅಂತಲೂ ಕರೆಯುತ್ತಿದ್ದರು ಎಂದು ಈಗಿನ ಅಲ್ಲಿನ ಕ್ಯಾಷಿಯರ್ ಮಾರುತಿ ಯವರು ಕೊಡುವ ಮಾಹಿತಿ.ಅಷ್ಟೇ ಅಲ್ಲದೆ ಮಾರುತಿಯವರು ಸಹ 1998 ರಿಂದಲೇ ಅಣ್ಣಾವ್ರ ಮನೆಗೆ ಊಟ ತೆಗೆದುಕೊಂಡು ಹೋಗುತ್ತಿದ್ದದ್ದು,ದೊಡ್ಡವರು ಸೇರಿ ಕುಟುಂಬದ ಎಲ್ಲ ಸದಸ್ಯರಿಗೆ ತಾವೇ ಖುದ್ದಾಗಿ ಊಟ ಬಡಿಸಿದ್ದನ್ನ ನೆನಪಿಸಿಕೊಂಡು,ತಮ್ಮ ಮತ್ತು ಪವರ್ ಸ್ಟಾರ್ ಪುನೀತ್ ರಾಜಕಮಾರ್ ರವರ ನಡುವಿನ ಸಂಭಾಷಣೆ,ದೃಶ್ಯಗಳನ್ನು ಚಾಚೂ ತಪ್ಪದೆ ನಮ್ಮ ಮುಂದೆ ನೆನಪಿಸಿಕೊಂಡು ಕಣ್ಣೀರು ಹಾಕಿದ್ದನ್ನ ನಾವು ಮರೆಯುವಂತಿಲ್ಲ..
ಅಣ್ಣಾವ್ರಂತಹ ಮಹಾನ್ ಶಕ್ತಿಯ ಅಭಿಮಾನಿಯಾಗಿ ಬಂದು,ಅವರಿಗೆ ಆಪ್ತರಾಗಿ,ದೊಡ್ಮನೆ ಕುಟುಂಬಕ್ಕೆ ನಿರಂತರ ಊಟವನ್ನು ಕೊಡುತ್ತ ಹಾಗೇ ಸಿನಿಮಾ ನಿರ್ಮಾಪಕರಾಗಿ ಬೆಳೆದ ಅಸಮಾನ್ಯ ಸಾಧಕ ಮೋಹನ್ ರಾವ್ ಕನಸಿನ ಕೂಸು ಈ ನವಯುಗ ಹೋಟೆಲ್..
ರವೀ ಸಾಸಾನೂರ್