“ಮರ್ಡರ್ ಕೇಸ್ ಹಿಡಿದು” ಮತ್ತೆ ಕೋರ್ಟ್ ಗೆ ಬಂದ್ರಾ ಸಿಎಸ್ಪಿ..?

ಕನ್ನಡ ನಾಡಿನ ಕಿರುತೆರೆ ಪ್ರೇಕ್ಷಕರ ನಾಡಿ ಮಿಡಿತವನ್ನ ಚೆನ್ನಾಗಿ ಗ್ರಹಿಸಿ ಅವರಿಗೆ ಧಾರಾವಹಿಗಳ ಮೂಲಕ ಮನರಂಜನೆ ನೀಡುತ್ತ ತಮ್ಮ ಲಾಯರ್ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ ಟಿ.ಎನ್ ಸೀತಾರಾಮ್, ಅವರ ಮನ್ವಂತರ, ಮಾಯಾಮೃಗ, ಮುಕ್ತ, ಮುಕ್ತ ಮುಕ್ತ.. ಸೀರಿಯಲ್ಗಳು  ಜನ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದವು. ಈಗ ಮತ್ತೊಂದು ಹೆಜ್ಜೆ ಮುಂದೆಹೋಗಿ ‘ಮಾಯಾ ಮರ್ಡರ್ ಕೇಸ್’ ವೆಬ್ ಸೀರೀಸ್ ಮಾಡುತ್ತಿದ್ದಾರೆ

ಸೀತಾರಾಮ್​ ನಿರ್ದೇಶನದ ಜನಪ್ರಿಯ ಧಾರಾವಾಹಿ ‘ಮಾಯಾಮೃಗ’ ಈಗಾಗಲೇ ‘ಭೂಮಿಕಾ ಟಾಕೀಸ್​’ ಯೂಟ್ಯೂಬ್ ಚಾನೆಲ್​ ಮೂಲಕ ಮರುಪ್ರಸಾರ ಆಗುತ್ತಿದೆ. ಅದೇ ಚಾನೆಲ್​ನಲ್ಲಿ ‘ಮಾಯಾ ಮರ್ಡರ್​ ಕೇಸ್​’ ಎಂಬ ಹೊಸ ವೆಬ್​ ಸರಣಿ ಪ್ರಸಾರ ಆಗಲಿದ್ದು, ಅದಕ್ಕೆ ಸೀತಾರಾಮ್​ ನಿರ್ದೇಶನ ಮಾಡಲಿದ್ದಾರೆ. ಅದರ ಟೀಸರ್​ ಬಿಡುಗಡೆ ಆಗಿದ್ದು, ಕಥೆಯ ಎಳೆ ಏನೆಂಬ ಸುಳಿವನ್ನು ಕೊಟ್ಟಿದ್ದಾರೆ ಟಿ.ಎನ್.ಸೀತಾರಾಮ್​.

ಹೆಸರೇ ಸೂಚಿಸುವಂತೆ ಇದೊಂದು ಸಸ್ಪೆನ್ಸ್​ ಥ್ರಿಲ್ಲರ್​ ಕಥೆ. ಬೆಂಗಳೂರಿನಲ್ಲಿ ನಡೆದ ಕೊಲೆಯೊಂದರ ಸುತ್ತ ಈ ವೆಬ್​ ಸಿರೀಸ್​ ಸಾಗಲಿದೆ. ಇದು ಕುತೂಹಲಕಾರಿ ಕೋರ್ಟ್​ ರೂಮ್​ ಕಥೆ ಆಗಿರಲಿದೆ ಎಂದು ಟೀಸರ್​ನಲ್ಲಿ ತಿಳಿಸಲಾಗಿದೆ. ವಕೀಲನ ಪಾತ್ರದಲ್ಲಿ ಟಿಎನ್​ ಸೀತಾರಾಮ್​ ಕಾಣಿಸಿಕೊಳ್ಳಲಿದ್ದಾರೆ. ‘ಇದು ಗೆಲ್ಲಲು ಸಾಧ್ಯವಾಗದ ಕೇಸ್​’ ಎಂಬ ಕ್ಯಾಪ್ಷನ್​ ಕೂಡ ಈ ಟೀಸರ್​ನಲ್ಲಿ ಗಮನ ಸೆಳೆಯುತ್ತಿದೆ.

‘ಮಯಾ ಮರ್ಡರ್​ ಕೇಸ್​’ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನೂ ಸೀತಾರಾಮ್​ ಅವರೇ ನಿಭಾಯಿಸುತ್ತಿದ್ದಾರೆ. ಹಾಗಾಗಿ ಈ ವೆಬ್​ ಸಿರೀಸ್​ ಮೇಲೆ ಕುತೂಹಲ ಮೂಡಿದೆ. ಯಾವಾಗ ಶೂಟಿಂಗ್​ ಶುರು ಆಗಲಿದೆ? ಯಾವೆಲ್ಲ ಕಲಾವಿದರು ನಟಿಸಲಿದ್ದಾರೆ? ಯಾವಾಗ ಪ್ರಸಾರ ಆರಂಭ ಆಗಲಿದೆ ಎಂಬಿತ್ಯಾದಿ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ. ಸೀತಾರಾಮ್​ ಅವರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಈ ಟೀಸರ್​ ಹಂಚಿಕೊಂಡಿದ್ದಾರೆ. ಅದಕ್ಕೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಬಂದಿವೆ. ಆದಷ್ಟು ಬೇಗ ಈ ವೆಬ್​ ಸಿರೀಸ್​ ಶುರುವಾಗಲಿ ಎಂದು ಎಲ್ಲರೂ ವಿಶ್ ಮಾಡಿದ್ದಾರೆ.

Exit mobile version