ಡಿಸೆಂಬರ್ 31 ರ ಕರ್ನಾಟಕ ಬಂದ್ ಗೆ ಸ್ಯಾಂಡಲ್ ವುಡ್ ಬೆಂಬಲ!

ಡಿಸೆಂಬರ್ 31 ರಂದು ಚಿತ್ರೀಕರಣ ಸೇರಿದಂತೆ ಚಿತ್ರರಂಗದ ಎಲ್ಲ ಚಟುವಟಿಕೆಗಳು ಬಂದ್ ಆಗಿರಲಿವೆ ಎಂದು ನಿರ್ಮಾಪಕ, ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ, ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಅಟ್ಟಹಾಸ, ಕೊಲ್ಲಾಪುರದಲ್ಲಿ ಕರ್ನಾಟಕ ಧ್ವಜ ಸುಟ್ಟ ಘಟನೆ ಖಂಡಿಸಿ ಡಿಸೆಂಬರ್ 31ಕ್ಕೆ ಕನ್ನಡ ಪರ ಸಂಘಟನೆಗಳು ರಾಜ್ಯ ಬಂದ್‌ಗೆ ಕರೆ ನೀಡಲಾಗಿದ್ದು, ಇದಕ್ಕೆ ಚಿತ್ರರಂಗವೂ ಬೆಂಬಲ ಸೂಚಿಸಿದೆ.

ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಭೆ ಸೇರಿದ್ದ ಕನ್ನಡಪರ ಸಂಘಟನೆಗಳು ಡಿಸೆಂಬರ್ 31 ಕ್ಕೆ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದು, ಚಿತ್ರರಂಗವೂ ಸಹ ಡಿಸೆಂಬರ್ 31 ರಂದು ತನ್ನೆಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಕರ್ನಾಟಕ ಧ್ವಜವನ್ನು ಸುಟ್ಟ ವಿಚಾರವಾಗಿ ದ್ವನಿ ಎತ್ತಿದ ಮೊದಲಿಗರಲ್ಲಿ ಕನ್ನಡ ಚಿತ್ರರಂಗ ಸಹ ಒಂದಾಗಿದೆ. ಜಗ್ಗೇಶ್, ಶಿವರಾಜ್ ಕುಮಾರ್ ಅವರು ಟ್ವೀಟ್ ಮಾಡುವ ಮೂಲಕ ಕನ್ನಡ ಧ್ವಜ ಸುಟ್ಟ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು. ಆ ನಂತರ ಈ ವಿಷಯ ಇನ್ನಷ್ಟು ಪ್ರಖರವಾಗುತ್ತಾ ಹೋಗಿ ಪ್ರತಿಭಟನೆಗಳು ನಡೆದು, ವಿಧಾನಸಭೆಯಲ್ಲಿ ಚರ್ಚೆಯಾಗಿ ಇದೀಗ ಬಂದ್ ವರೆಗೆ ಬಂದಿದೆ.

ಡಿಸೆಂಬರ್ 31ರ ಕರ್ನಾಟಕ ಬಂದ್‌ಗೆ ಈಗಾಗಲೇ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದೆ.ಸಾರಾ ಗೋವಿಂದು ಹೇಳಿರುವಂತೆ ಚಿತ್ರರಂಗ ಸಹ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದೆ. ಚಿತ್ರಮಂದಿರಗಳ ಮಾಲೀಕರ ಸಂಘವು ಸಹ ಬಂದ್‌ಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಅವರ ನಿರ್ಣಯ ಇನ್ನಷ್ಟೆ ಹೊರಬೀಳಬೇಕಿದೆ.

****

Exit mobile version