ನಾಗಶೇಖರ್ ನಿರ್ದೇಶನದ ಲವ್ ಮಾಕ್ ಟೈಲ್ ಕೃಷ್ಣ ನಾಯಕನಾಗಿ ಭಾವನಾ ಮೆನನ್ ನಾಯಕಿಯಾಗಿ ಅಭಿನಯಿಸಿರುವ ಶ್ರೀಕೃಷ್ಣ@ಜಿಮೇಲ್.ಕಾಮ್ ಚಿತ್ರ ಅಕ್ಟೋಬರ್ 15 ರಂದು ಬಿಡುಗಡೆ ಆಗಲಿದೆ.
ಕೊರೊನಾ ಪ್ಯಾಂಡಮಿಕ್ ಕಡಿಮೆಯಾದ ಕಾರಣ ಚಿತ್ರಮಂದಿರಗಳ ಪೂರ್ಣ ಭರ್ತಿಗೆ ಅವಕಾಶ ಸಿಕ್ಕಕೂಡಲೆ ಹಲವು ಬಿಗ್ ಬಜೆಟ್ ಮತ್ತು ದೊಡ್ಡ ಸ್ಟಾರ್ ನಟರ ಸಿನಿಮಾಗಳು ರೇಸ್ನಲ್ಲಿವೆ. ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ ಸಲಗ ಚಿತ್ರ ಅಕ್ಟೋಬರ್ 14 ರಂದು ಬಿಡುಗಡೆ ಆಗುತ್ತಿದ್ದರೆ ಅದೇ ದಿನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ರಿಲೀಸ್ ಆಗ್ತಿದೆ ಇವೆರಡರ ನಡುವೆ ಶ್ರೀಕೃಷ್ಣ@ಜಿಮೇಲ್.ಕಾಮ್ ಹೇಗೆ ಸೌಂಡ್ ಮಾಡುತ್ತೊ ಕಾದು ನೋಡಬೇಕಿದೆ.
ಶೇ.50ರಷ್ಟು ಆಸನ ಭರ್ತಿ ಮಿತಿ ಇದ್ದಾಗಲೇ ಈ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕ ಸಂದೇಶ್ ನಾಗರಾಜ್ ಸಿದ್ಧರಿದ್ದರು. ಈಗ ಶೇ.100ರಷ್ಟು ಆಕ್ಯುಪೆನ್ಸಿಗೆ ಅವಕಾಶ ಸಿಕ್ಕಿರುವುದು ಅವರಿಗೆ ಖುಷಿ ನೀಡಿದೆ. ‘ದಸರಾಗೆ ಸಾಲುಸಾಲು ರಜೆ ಇದೆ. ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರಲು ಅನುಕೂಲವಾಗುತ್ತದೆ. ಈ ವೇಳೆ ಇನ್ನೂ ಎರಡು ಚಿತ್ರಗಳು ಬಿಡುಗಡೆ ಆಗುತ್ತಿವೆ. ಎಲ್ಲಾ ಚಿತ್ರಗಳಿಗೂ ಒಳ್ಳೆಯದಾಗಲಿ’ ಎನ್ನುತ್ತಾರೆ ಸಂದೇಶ್ ನಾಗರಾಜ್.
ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಕೂಡ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ತಾವು ಹೀರೋ ಆಗಿದ್ದರೂ ಕೂಡ ಇದರಲ್ಲಿ ಪೋಷಕ ಮಾತ್ರ ನಿಭಾಯಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ನಾಗಶೇಖರ್, ‘ಈ ಸಿನಿಮಾದಲ್ಲಿ ವಿಭಿನ್ನವಾದ ಕಥೆ ಇದೆ. ನಾನು ಮತ್ತು ಪ್ರೀತಂ ಗುಬ್ಬಿ ಚಿತ್ರಕಥೆ ಬರೆದಿದ್ದೇವೆ. ಸುಮಾರು 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್, ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದಿದ್ದಾರೆ.
ಬೃಂದಾ ಎನ್. ಜಯರಾಂ ಅವರು ಈ ಚಿತ್ರದ ಸಹ ನಿರ್ಮಾಪಕರು. ಚಂದನ್ ಗೌಡ ದ್ವಿತೀಯ ನಾಯಕರಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಸಾಧುಕೋಕಿಲ, ಅಚ್ಯುತ್ ಕುಮಾರ್, ಸಾತ್ವಿಕ್ ಮುಂತಾದವರು ನಟಿಸಿದ್ದಾರೆ. ಐದು ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ, ಅರುಣ್ ಸಾಗರ್ ಕಲಾ ನಿರ್ದೇಶನ ಮಾಡಿದ್ದಾರೆ.
****