new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಲವ್ ಇದೆ, ಲವ್ ಸ್ಟೋರಿ ಅಲ್ಲ…ರೌಡಿಗಳಿದ್ದಾರೆ, ರೌಡಿಸಂ ಇಲ್ಲ…ಠಾಣೆಯಲ್ಲೇ ಶುರುವಾಯ್ತು ಪ್ರೇಮ್ ಕಟ್ಟಿದ ‘ದಾದಾ’ನ ಹಾಲಿಡೇ

ಲವ್ ಇದೆ, ಲವ್ ಸ್ಟೋರಿ ಅಲ್ಲ…ರೌಡಿಗಳಿದ್ದಾರೆ, ರೌಡಿಸಂ ಇಲ್ಲ…ಠಾಣೆಯಲ್ಲೇ ಶುರುವಾಯ್ತು ಪ್ರೇಮ್ ಕಟ್ಟಿದ ‘ದಾದಾ’ನ ಹಾಲಿಡೇ
  • PublishedNovember 27, 2026

ರಜೆ ಅಂದರೆ ಸಾಮಾನ್ಯವಾಗಿ ಬೀಚು, ಬೆಟ್ಟ, ರೆಸಾರ್ಟು. ಆದರೆ ಈ ದಾದಾನ ರಜೆ ಶುರುವಾಗುವುದು ಪೊಲೀಸ್ ಠಾಣೆಯ ಒಳಗೆ. ಹೂವಿನ ಚಿತ್ತಾರದ ಶರ್ಟು, ಮಡಚಿ ಕಟ್ಟಿದ ಪಂಚೆ, ಕೊರಳಲ್ಲಿ ಚಿನ್ನದ ಸರ, ಕಿವಿಗೆ ಓಲೆ, ತುಟಿಯಲ್ಲಿ ಕಡ್ಡಿ, ಕಣ್ಣಿಗೆ ಕೆಂಪು ಹಾರ್ಟ್ ಕನ್ನಡಕ. ಟೇಬಲ್ ಮೇಲೆ ಪಾಸ್‌ಪೋರ್ಟ್, ಗೋಡೆ ಮೇಲೆ ರೌಡಿಗಳ ಫೋಟೋಗಳ ಸಾಲು, ಅದರ ನಡುವೆ ಠಾಣೆಯ ನೆಲವನ್ನೇ ಸ್ಟೇಜ್ ಮಾಡಿಕೊಂಡು ಸ್ಟೆಪ್ ಹಾಕುವ ಕಿಚ್ಚ ಸುದೀಪ್. ಶೋಮ್ಯಾನ್ ಪ್ರೇಮ್ ನಿರ್ದೇಶನದ ಹೊಸ ಸಿನಿಮಾದ ಹೆಸರು ‘ದಾದಾ ಆನ್ ಹಾಲಿಡೇ’ ಎಂದು ಇಂದು ಟೈಟಲ್ ಟೀಸರ್ ಮೂಲಕ ಅಧಿಕೃತವಾಗಿ ಹೊರಬಿದ್ದಿದೆ. ಸೆನ್ಸಾರ್ ಪ್ರಮಾಣಪತ್ರದ ಸ್ಕ್ರೀನ್‌ಶಾಟ್‌ಗಳಿಂದ ಹೆಸರು ಮೊದಲೇ ಲೀಕ್ ಆಗಿತ್ತಾದರೂ, ಕಿಚ್ಚ ಯಾವ ಅವತಾರದಲ್ಲಿ ಬರುತ್ತಾರೆ ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿದ್ದು ಈಗಲೇ.

‘ದಿ ವಿಲನ್’ ಬಳಿಕ ಸುಮಾರು ಎಂಟು ವರ್ಷಗಳ ನಂತರ, ‘ಕೆಡಿ’ಯಲ್ಲಿನ ಅತಿಥಿ ಪಾತ್ರವನ್ನು ಬಿಟ್ಟರೆ, ಕಿಚ್ಚ ಮತ್ತು ಪ್ರೇಮ್ ಪೂರ್ಣ ಪ್ರಮಾಣದಲ್ಲಿ ಮತ್ತೆ ಒಂದಾಗಿದ್ದಾರೆ. ಅಕ್ಟೋಬರ್‌ನಲ್ಲೇ ಬರಬೇಕಿದ್ದ ಟೈಟಲ್ ಘೋಷಣೆ ಕಾರಣಾಂತರಗಳಿಂದ ಮುಂದೆ ಹೋಗಿ, ಕಾದು ಕಾದು ಸುಸ್ತಾಗಿದ್ದ ಅಭಿಮಾನಿಗಳಿಗೆ ಈಗ ಡಬಲ್ ಖುಷಿ. ಟೀಸರ್‌ನ ಮೊದಲ ಭಾಗದಲ್ಲಿ ಠಾಣೆಯೊಳಗಿನ ಪೊಲೀಸರ ನಗುವಿನ ದೃಶ್ಯಗಳು, ಹಾರ್ಮೋನಿಯಂ ಹಿಡಿದ ಹಾಡುಗಾರ, ನಂತರ ಶೈಲಿಯಲ್ಲೇ ಎಂಟ್ರಿ ಕೊಡುವ ‘ಕಿಂಗ್ ಕಿಚ್ಚ’. “ಈ ಸಿನಿಮಾದಲ್ಲಿ ಲವ್ ಇರುತ್ತದೆ, ಆದರೆ ಲವ್ ಸ್ಟೋರಿ ಅಲ್ಲ, ಸೆಂಟಿಮೆಂಟ್ ಇದೆ, ಆದರೆ ಮದರ್ ಸೆಂಟಿಮೆಂಟ್ ಇರೋದಿಲ್ಲ, ರೌಡಿಗಳು ಇರ್ತಾರೆ, ಆದರೆ ರೌಡಿಸಂ ಇರೋದಿಲ್ಲ” ಎನ್ನುವ ಪ್ರೇಮ್ ಮಾತುಗಳೇ ಇದು ಯಾವ ಬಗೆಯ ಸಿನಿಮಾ ಎನ್ನುವ ಪ್ರಶ್ನೆಯನ್ನು ಇನ್ನಷ್ಟು ಜೋರು ಮಾಡಿವೆ. ಉತ್ತರ ಬೇಕಾದರೆ ಥಿಯೇಟರ್‌ಗೇ ಬರಬೇಕು.

ಆರುದ್ರ ಸಿನಿಮಾಸ್ ಮತ್ತು ಪ್ರೇಮ್ಸ್ ಸ್ಟುಡಿಯೋಸ್ ಅಡಿಯಲ್ಲಿ ರೂಪೇಶ್ ಕುಮಾರ್ ಜಿ, ಶಶಿಕಿರಣ್ ಆರ್ ಮತ್ತು ರಕ್ಷಿತಾ ಪ್ರೇಮ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಶೇಖರ್ ಚಂದ್ರು ಛಾಯಾಗ್ರಹಣ, ಸಂಕೇತ್ ಆಚಾರ್ ಸಂಕಲನ, ಅಭಿಜಿತ್ ಮಹೇಶ್ ಸಂಭಾಷಣೆ, ಶಿವಕುಮಾರ್ ಜೆ ಕಲಾ ನಿರ್ದೇಶನ ಚಿತ್ರಕ್ಕಿದೆ. ಆನಂದ್ ಆಡಿಯೋದಲ್ಲಿ ಟೀಸರ್ ಬಿಡುಗಡೆಯಾಗಿದ್ದು, ಕೊನೆಯ ಫ್ರೇಮ್ ಹೇಳುವುದು ಒಂದೇ ಮಾತು: 2027 ರಲ್ಲಿ ಹಬ್ಬದ ಉಡುಗೊರೆಯಾಗಿ ಥಿಯೇಟರ್‌ಗೆ. ವಿಲನ್ ಆಗಿ ಬಂದು ಹೋದ ಜೋಡಿ ಈ ಬಾರಿ ದಾದಾನನ್ನು ರಜೆಗೆ ಕಳುಹಿಸಿದೆ. ಆ ರಜೆ ಎಷ್ಟು ಮಜಾ ಇರುತ್ತದೆ ಎನ್ನುವುದನ್ನು ಹಬ್ಬದ ದಿನವೇ ನೋಡಬೇಕು.

Written By
Kannada Picchar

Leave a Reply

Your email address will not be published. Required fields are marked *