ಸೈಬರ್ ಕ್ರೈಮ್ ಸುಳಿಯ ಎಳೆ.. ‘100’ ಸಿನಿಮಾ ರಿವ್ಯೂ

ಲಾಕ್‌ಡೌನ್‌ ಬಳಿಕ ವಾರಕ್ಕೆ ಐದಾರು ಸಿನಿಮಾಗಳು ಬಿಡುಗಡೆಯಾಗುತ್ತಿದ್ದರೂ, ಮನೆಮಂದಿ ಎಲ್ಲ ಒಟ್ಟಿಗೆ ಕೂತು ನೋಡುವಂಥ ಸಿನಿಮಾಗಳು ಬರುತ್ತಿಲ್ಲ ಎನ್ನುತ್ತಿದ್ದ ಫ್ಯಾಮಿಲಿ ಆಡಿಯನ್ಸ್‌ಗೆ ಅವರು ನಿರೀಕ್ಷಿಸಿರುವಂಥ ಸಿನಿಮಾವೊಂದು ತೆರೆಗೆ ಬಂದಿದೆ. ಅದೇ “100′.

ಇಲ್ಲೊಂದು ಹೊಸಥರದ ಕಥೆ ಇದೆ. ಭಾವನಾತ್ಮಕ ಸನ್ನಿವೇಶಗಳಿವೆ, ಸೀಟ್‌ನಲ್ಲಿ ಕೊನೆವರೆಗೂ ಹಿಡಿದು ಕೂರಿಸುವಂಥ ಕೌತುಕದ ಅಂಶಗಳಿವೆ ಕೊನೆಗೊಂದು ಮೆಸೇಜ್‌ ಇದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ನಮ್ಮ ನಡುವೆಯೇ ನಡೆಯುವಂಥ ಘಟನೆಗಳೇ ತೆರೆಮೇಲೂ ಕಾಣುವುದರಿಂದ, ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರಿಗೂ ಕನೆಕ್ಟ್ ಆಗುತ್ತದೆ.ಒಟ್ಟಾರೆ “100′ ಅನ್ನೋದು ಮನೆಮಂದಿ ಕುಳಿತು ನೋಡುವಂಥ, ಔಟ್‌ ಆಂಡ್‌ ಔಟ್‌ ಫ್ಯಾಮಿಲಿ ಎಂಟರ್‌ ಟೈನರ್‌ ಸಿನಿಮಾ ಅನ್ನೋದರಲ್ಲಿ ಎರಡು ಮಾತಿಲ್ಲ ,

ಇನ್ನು “100′ ಸಿನಿಮಾದ ಕಥಾಹಂದರದ ಬಗ್ಗೆ ಹೇಳುವುದಾದರೆ, ಇದೊಂದು ಸೈಬರ್‌ ಕ್ರೈಂ ಸುತ್ತ ನಡೆಯುವ ಸಿನಿಮಾ. ಮನೆಯೊಳಗೆ ನಮ್ಮ ಕುಟುಂಬದ ಸದಸ್ಯರು ಭೌತಿಕವಾಗಿ ನೆಮ್ಮದಿಯಾಗಿ, ಸೇಫ್ ಆಗಿದ್ದರೂ, ನಮ್ಮ ಕೈಯಲ್ಲಿರುವ ಮೊಬೈಲ್‌ ಪೋನ್‌ ಮತ್ತು ಇಂಟರ್‌ನೆಟ್‌ ಎಂಬ ಮತ್ತೂಂದು ಜಗತ್ತಿನಲ್ಲಿ ಯಾರೂ ನೆಮ್ಮದಿಯಾಗಿ, ಸೇಫ್ ಆಗಿ ಇರಲು ಸಾಧ್ಯವಿಲ್ಲ. ಗೊತ್ತಿಧ್ದೋ, ಗೊತ್ತಿಲ್ಲದೆಯೋ.., ಎಲ್ಲರೂ ಅಂತರ್ಜಾಲದ ಸುಳಿಯೊಳಗೆ ಸಿಲುಕಿಕೊಂಡಿರುತ್ತೇವೆ.

ಹೀಗೆ ಈ ನೆಟ್‌ ಲೋಕದ ಸುಳಿಯೊಳಗೆ, ಸಿಲುಕಿಕೊಂಡ ವಿಷ್ಣು (ರಮೇಶ್‌ ಅರವಿಂದ್‌) ಎಂಬ ಪೊಲೀಸ್‌ ಇಲಾಖೆಯ ಸೈಬರ್‌ ಕ್ರೈಂ ಅಧಿಕಾರಿಯ ಫ್ಯಾಮಿಲಿಯ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಜನಸಾಮಾನ್ಯರಿಂದ ಹಿಡಿದು, ಉದ್ಯಮಿಗಳು, ರಾಜಕಾರಣಿಗಳು, ಪೊಲೀಸ್‌ ಅಧಿಕಾರಿಗಳು ಯಾರೂ ಕೂಡ ಈ ಸೈಬರ್‌ ಲೋಕದಲ್ಲಿ ಸುರಕ್ಷಿತರಲ್ಲ ಎಂಬ ವಾಸ್ತವ ಸತ್ಯದ ಜೊತೆಗೆ ಸಿನಿಮಾದ ಕಥೆ ತೆರೆದು ಕೊಳ್ಳುತ್ತದೆ. ಜನಸಾಮಾನ್ಯರನ್ನು ರಕ್ಷಿಸಬೇಕಾದ ಪೊಲೀಸ್‌ ಅಧಿಕಾರಿಯೇ ತನ್ನ ಫ್ಯಾಮಿಲಿಯನ್ನು ರಕ್ಷಿಸಿಕೊಳ್ಳಲು ಹೇಗೆಲ್ಲ ಹೋರಾಟ ಮಾಡುತ್ತಾನೆ. ಕೊನೆಗೆ ಈ ನೆಟ್‌ ಲೋಕದ ಗುದ್ದಾಟದಲ್ಲಿ ವಿಷ್ಣು ಗೆಲ್ಲುತ್ತಾನಾ? ಅಂತರ್ಜಾಲದ ಅಸಲಿಯತ್ತೇನು? ಅನ್ನೋದು “100′ ಸಿನಿಮಾದ ಕ್ಲೈಮ್ಯಾಕ್ಸ್‌. ಅದು ಗೊತ್ತಾಗುವ ಹೊತ್ತಿಗೆ ಸಿನಿಮಾ ಮುಗಿದಿರುವುದೂ ಪ್ರೇಕ್ಷಕರಿಗೆ ಗೊತ್ತಾಗಿರುವುದಿಲ್ಲ.

ಆಗಾಗ್ಗೆ ಪತ್ರಿಕೆಗಳು, ಟಿವಿಗಳಲ್ಲಿ ವರದಿಯಾಗುವ ಸೈಬರ್‌ ಕ್ರೈಂ ಅಂಶವನ್ನು ಇಟ್ಟುಕೊಂಡು ಅದನ್ನು ಕುತೂಹಲಭರಿತವಾಗಿ “100′ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ತರುವಲ್ಲಿ ನಟ ಕಂ ನಿರ್ದೇಶಕ ರಮೇಶ್‌ ಅರವಿಂದ್‌ ಯಶಸ್ವಿಯಾಗಿದ್ದಾರೆ.

ಡ್ಯಾನ್ಸ್‌, ಆಯಕ್ಷನ್‌, ಕಾಮಿಡಿ, ಲವ್‌, ಎಮೋಶನ್ಸ್‌ ಹೀಗೆ ಎಲ್ಲ ಅಂಶಗಳು ಚಿತ್ರಕಥೆಯಲ್ಲಿ ಹದವಾಗಿ ಬೆರೆತಿತುವುದರಿಂದ “100′ ಎಲ್ಲ ವರ್ಗದ ಆಡಿಯನ್ಸ್‌ಗೂ ಇಷ್ಟವಾಗುವಂತಿದೆ. ತೆರೆಮೇಲೂ ರಮೇಶ್‌, ರಚಿತಾ, ಪೂರ್ಣ ಹೀಗೆ ಬಹುತೇಕ ಕಲಾವಿದರು ತಮ್ಮ ಅಭಿನಯದಲ್ಲಿ ನೋಡುಗರಿಗೆ ಆಪ್ತವಾಗುತ್ತ ಹೋಗುತ್ತಾರೆ. ಚಿತ್ರದ ಒಂದೆರಡು ಹಾಡುಗಳು, ಸಂಭಾಷಣೆ ಗಮನ ಸೆಳೆಯುತ್ತದೆ. ಛಾಯಾಗ್ರಹಣ ಮತ್ತು ಸಂಕಲನ ಮತ್ತು ಹಿನ್ನೆಲೆ ಸಂಗೀತ ಎಲ್ಲವೂ ಚಿತ್ರದ ಪ್ಲಸ್‌ ಎನ್ನಬಹುದು. ಹೊಸಥರದ ಸಿನಿಮಾಗಳನ್ನು ನಿರೀಕ್ಷಿಸುವ, ಎಂಟರ್‌ಟೈನ್ಮೆಂಟ್‌ ಜೊತೆಗೆ ಮೆಸೇಜ್‌ ಇರುವಂಥ “100′ ಸಿನಿಮಾವನ್ನು ಒಮ್ಮೆ ಫ್ಯಾಮಿಲಿ ಜೊತೆ ನೋಡಿಬರಲು ಅಡ್ಡಿಯಿಲ್ಲ.

****

Exit mobile version