ರೂ 400 ಕೋಟಿ ಬಜೆಟ್ ಸಿನಿಮಾದಲ್ಲಿ ನಟಿಸ್ತಿದ್ದಾರೆ ಲವ್ಲಿ ಸ್ಟಾರ್ ಪ್ರೇಮ್..!

‘ಪ್ರೇಮಂ ಪೂಜ್ಯಂ’. ನೆನಪಿರಲಿ ಪ್ರೇಮ್‌ ನಾಯಕನಾಗಿ ನಟಿಸಿರುವ ಈ ಚಿತ್ರ ಇನ್ನೂ ರಿಲೀಸ್‌ ಆಗಿಲ್ಲ. ಅದಕ್ಕೂ ಮೊದಲೇ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದೆ ಈ ಜೋಡಿ. ಸುಮಾರು 350-400 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಆಗಲಿದೆ ಎಂದಿದ್ದಾರೆ ನಿರ್ದೇಶಕರು. ಆ ಚಿತ್ರದಲ್ಲಿ ಪ್ರೇಮ್​ ಅವರು ಯೋಧನ ಪಾತ್ರ ಮಾಡಲಿದ್ದಾರೆ.

ಈ ಸಿನಿಮಾವನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗುವ ಗುರಿ ಇದೆ ಎಂದಿದ್ದಾರೆ ಅವರು. ‘ಸಿನಿಮಾದಲ್ಲಿ ಹಾಲಿವುಡ್‌ ನಟರೂ ನಟಿಸುವ ಸಾಧ್ಯತೆ ಇದೆ. ಬ್ರಿಟಿಷರ ಸೇನಾಪಡೆ ಭಾರತದಲ್ಲಿ ಇದ್ದಾಗಿನ ಕಥೆ ಇರುವುದರಿಂದ ಹಾಲಿವುಡ್‌ ನಟರನ್ನು ಕರೆತರಬೇಕೆಂದಿದ್ದೇವೆ. ಬಿಗ್‌ ಬಜೆಟ್‌ ಸಿನಿಮಾ. 400 ಕೋಟಿ ರೂ. ಬಜೆಟ್‌ ಆಗಿರೋದ್ರಿಂದ ದೊಡ್ಡ ಮಲ್ಟಿ ಮೀಡಿಯಾ ಕಂಪನಿಗಳು ಮತ್ತು ವಿದೇಶಿ ಕಂಪನಿಗಳು ನಮ್ಮ ಜತೆ ಕೈಜೋಡಿಸಲಿದ್ದಾರೆ. ಈಗಾಗಲೇ ಮಾತುಕತೆ ನಡೆದಿದೆ’ ಎಂದಿದ್ದಾರೆ.

ಚಿತ್ರಕ್ಕೆ ‘ಮಾರ್ಷಲ್‌’ ಎಂಬ ಹೆಸರು ಕೇಳಿಬಂದಿದೆ. ಆದರೆ ಟೈಟಲ್‌ ಇನ್ನೂ ಅಂತಿಮಗೊಂಡಿಲ್ಲ ಎಂದಿದ್ದಾರೆ ನಿರ್ದೇಶಕರು. ‘ಸದ್ಯದಲ್ಲೇ ಟೈಟಲ್‌ ಫಿಕ್ಸ್‌ ಮಾಡಲಿದ್ದೇವೆ. ಮಾರ್ಷಲ್‌ ಎಂಬ ಟೈಟಲ್‌ ಹಾಲಿವುಡ್‌, ತೆಲುಗು ಸಿನಿಮಾಗಳಿಗೆ ಈಗಾಗಲೇ ಇಟ್ಟಿದ್ದಾರೆ. ಈ ಚಿತ್ರಕ್ಕೆ ಹಾಲಿವುಡ್‌ ಡಿಒಪಿ ಆಯ್ಕೆ ಮಾಡುವ ಬದಲು ಮಫ್ತಿ, ಪ್ರೇಮಂ ಪೂಜ್ಯ ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ನವೀನ್‌ ಅವರನ್ನೇ ಆಯ್ಕೆ ಮಾಡಿಕೊಂಡಿದ್ದೇವೆ’ ಎಂದಿದ್ದಾರೆ ರಾಘವೇಂದ್ರ.

ಮುಂದಿನ ತಿಂಗಳು ಅಕ್ಟೋಬರ್​ ಕೊನೇ ವಾರದಲ್ಲಿ ಪ್ರೇಮಂ ಪೂಜ್ಯಂ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಪ್ರೇಮ್​ ಜೊತೆ ಬೃಂದಾ ಆಚಾರ್ಯಾ, ಐಂದ್ರಿತಾ ರೇ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾ ರಿಲೀಸ್​ ಆದ ಬಳಿಕ ಪ್ರೇಮ್ ಅವರು ವಿದೇಶಕ್ಕೆ ತೆರಳಿ ಹೊಸ ಚಿತ್ರಕ್ಕಾಗಿ ಒಂದಷ್ಟು ತರಬೇತಿ ಪಡೆದುಕೊಳ್ಳಲಿದ್ದಾರೆ.

****

Exit mobile version