‘ಮದಗಜ’ ಟ್ರೇಲರ್ ರಿಲೀಸ್ ಮಾಡಿದ ಸಿಎಂ ಬೊಮ್ಮಾಯಿ!

ಮದಗಜ ಸಿನಿಮಾ ಟ್ರೇಲರ್ ಅನ್ನು ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿದ್ದಾರೆ. ಬಿಡುಗಡೆಯಾದ ಮದಗಜ ಟ್ರೇಲರ್​ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಮದಗಜ ಟ್ರೇಲರ್​ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಶ್ರೀಮುರಳಿಗೆ ಆಲ್ ದಿ ಬೆಸ್ಟ್ ಹೇಳಿದರು. ಟ್ರೇಲರ್ ಇಷ್ಟು ಅದ್ಭುತವಾಗಿದೆ ಅಂದ್ರೆ ಸಿನಿಮಾನೂ ಚೆನ್ನಾಗಿರುತ್ತೆ. ಶ್ರೀಮುರಳಿ ಹಾಲಿವುಡ್ ಹೀರೋ ಆಗಿದ್ದಾರೆ. ಒಬ್ಬ ವ್ಯಕ್ತಿಗೆ ವಯಸ್ಸು ಮುಖ್ಯವಲ್ಲ, ಸಾಧನೆ ಮುಖ್ಯ ಎಂದು ಹೇಳಿದರು.

ಸಾಧಕರು ಸಣ್ಣ ವಯಸ್ಸಿನಲ್ಲೇ ಲೋಕ ಬಿಡ್ತಾರೆ. ನಮ್ಮ ಅಪ್ಪು ಹೃದಯಗಳಲ್ಲಿ ಚಿರಸ್ಥಾಯಿ. ನಮ್ಮ ಹಾರ್ಟ್ ಬೀಟ್ ಇರೋವರೆಗೂ ಅಪ್ಪು ಇರುತ್ತಾರೆ. ಸಾಧಕನಿಗೆ ಸಾವು ಅಂತ್ಯವಲ್ಲ. ಆ ಶ್ರೇಣಿಗೆ ಪುನೀತ್ ಸೇರಿಕೊಳ್ತಾರೆ ಎಂದು ಅಗಲಿದ ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್ ಅವರನ್ನು ನೆನೆದರು.ಇದೇ ವೇಳೆ ಮದಗಜ ಚಿತ್ರತಂಡದ ವತಿಯಿಂದ ಮುಖ್ಯಮಂತ್ರಿಗಳಿಗೆ ನಿರ್ಮಾಪಕ ಉಮಾಪತಿ ಗೌಡ ನೆರೆ ಪರಿಹಾರ ನಿಧಿಗೆ ₹11 ಲಕ್ಷ ಚೆಕ್ ಹಸ್ತಾಂತರಿಸಿದರು.

ಮೊದಲ ಬಾರಿಗೆ ಶ್ರೀಮುರಳಿ ಎದುರಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದು, ಚಿತ್ರದಲ್ಲಿ ಅವರು ಎರಡು ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಮಾಪತಿ ಶ್ರೀನಿವಾಸ್ ಗೌಡ ಚಿತ್ರಕ್ಕೆ  ಬಂಡವಾಳ ಹೂಡಿದ್ದು, ‘ಮಫ್ತಿ’ ಖ್ಯಾತಿಯ ನವೀನ್‌ ಕುಮಾರ್‌ ಚಿತ್ರಕ್ಕೆ ಸಿನಿಮಾಟೋಗ್ರಫಿ ಕೆಲಸ ಮಾಡಿದ್ದಾರೆ. ಹರೀಶ್ ಕೊಮ್ಮೆಯವರ ಸಂಕಲನವಿರುವ ಈ ಚಿತ್ರದಲ್ಲಿ ಚಿಕ್ಕಣ್ಣ, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರಕ್ಕಿದೆ. ಡಿಸೆಂಬರ್ 3 ರಂದು ಕನ್ನಡ ,ತೆಲುಗು, ತಮಿಳು ಭಾಷೆಗಳಲ್ಲಿ ‘ಮದಗಜ’ ಸಿನಿಮಾ ಬಿಡುಗಡೆಯಾಗಲಿದೆ.

****

Exit mobile version