ನಿಖಿಲ್ ಕುಮಾರಸ್ವಾಮಿ ಪುತ್ರನ ಆಗಮನದ ಖುಷಿಯಲ್ಲಿದ್ದಾರೆ. ಇದರ ಜೊತೆಗೆ ಅವರು ನಟಿಸಿರುವ ರೈಡರ್ ಸಿನಿಮಾ ಕೂಡ ತೆರೆಗೆ ಬರಲು ಸಿದ್ದವಾಗಿದೆ. ಇದೆಲ್ಲದರ ನಡುವೆ ಮತ್ತೊಂದು ಸಿಹಿ ಸುದ್ದಿ ಹೊರ ಬಿದ್ದಿದೆ. ಕೆವಿಎನ್ ಪ್ರೊಡಕ್ಷನ್ ಅವರ ಮುಂದಿನ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ನಟಿಸಲು ತಯಾರಿನಡೆಸಿದ್ದಾರೆ. ಇದು ನಿಖಿಲ್ ಅವರ 5ನೇ ಸಿನಿಮಾ ಆಗಲಿದೆ.
ಕೆವಿಎನ್ ಪ್ರೊಡಕ್ಷನ್ಸ್‌ನ ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ ನಟಿಸಲಿದ್ದು, ಸಿನಿಮಾವನ್ನು ಹೊಸ ನಿರ್ದೇಶಕ ಮಂಜು ಅಥರ್ವ ನಿರ್ದೇಶನ ಮಾಡಲಿದ್ದಾರೆ. ನಿಖಿಲ್ ಜೊತೆ ಸಿನಿಮಾ ಮಾಡುವುದಾಗಿ ಕೆವಿಎನ್ ಪ್ರೊಡಕ್ಷನ್ಸ್ ಜೂನ್ ತಿಂಗಳಲ್ಲಿಯೇ ಘೋಷಿಸಿತ್ತು, ಕೊರೊನಾ ಹಾಗೂ ನಿಖಿಲ್ ಅವರು ‘ರೈಡರ್’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದರಿಂದ ಸಿನಿಮಾದ ಚಿತ್ರೀಕರಣ ಆರಂಭವಾಗುವುದು ತಡವಾಗಿದೆ. ಸಿನಿಮಾಕ್ಕೆ ಹೆಸರಿನ್ನೂ ಇಟ್ಟಿಲ್ಲ. ‘ಮಫ್ತಿ’, ‘ಪ್ರೇಮಂ ಪೂಜ್ಯಂ’ ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಮಂಜು ಅಥರ್ವ ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಸ್ವತಂತ್ರ್ಯ ನಿರ್ದೇಶಕರಾಗುತ್ತಿದ್ದಾರೆ.
****