ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಎಂ.ಎಸ್ ಉಮೇಶ್ ಇನ್ನಿಲ್ಲ, ಅನಾರೋಗ್ಯದಿಂದ ಅಗಲಿದ ಹಿರಿಯ ಜೀವ.
ಕನ್ನಡದ ಹೆಸರಾಂತ ಹಾಸ್ಯ ಕಲಾವಿದ ಎಂ.ಎಸ್. ಉಮೇಶ್ ಅವರು ಆರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದಾರೆ. ಇತ್ತೀಚಿಗಷ್ಟೇ ಮನೆಯಲ್ಲಿ ಕಾಲು ಜಾರಿ ಬಿದ್ದಿದರಿಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಅಲ್ಲಿ ಹಲವಾರು ಟೆಸ್ಟ್ ಗಳಿಗೆ ಒಳಪಟ್ಟ ನಂತರ ಉಮೇಶ್ ಅವರಿಗೆ ನಾಲ್ಕನೇ ಹಂತದ ಲಿವರ್ ಕ್ಯಾನ್ಸರ್ ಇರುವುದು ಪತ್ತೆ ಆಗಿತ್ತು. ಹಾಗಾಗಿ ಚಿಕಿತ್ಸೆಗೆ ಒಳಪಟ್ಟಿದ್ದರು. ಆದರೆ ಇದೀಗ ತೀವ್ರ ಅನಾರೋಗ್ಯದಿಂದ ಅಸುನೀಗಿದ್ದಾರೆ.
ಕನ್ನಡ ಚಿತ್ರರಂಗ ಕಂಡ ಅದ್ಬುತ ಹಾಸ್ಯ ಕಲಾವಿದ, ತಮ್ಮ ಮುಖದ ಹಾವಭಾವದಿಂದಲೇ ವೀಕ್ಷಕರ ಮುಖದಲ್ಲಿ ನಗು ತರಿಸುತ್ತಿದ್ದ ಹಿರಿಯ ಕಲಾವಿದ.
ಸಿನಿ ಪಯಣ
4 ವರುಷದ ಪುಟ್ಟ ಬಾಲಕ ನಾಗಿಲಿಂದಲೂ ರಂಗಭೂಮಿಯಲ್ಲಿ ಬಾಲ ನಟರಾಗಿ ನಟಿಸುತ್ತಿದ್ದ ಇವರು, 1960 ರಲ್ಲಿ ‘ಮಕ್ಕಳ ರಾಜ್ಯ’ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಇಲ್ಲಿಯವರೆಗೆ ಬರೋಬ್ಬರಿ 360 ಚಿತ್ರಗಳಲ್ಲಿ ನಟನೆ ಮಾಡುವ ಮೂಲಕ ಚಿತ್ರ ರಂಗಕ್ಕೆ ಸೇವೆಯನ್ನು ಸಲ್ಲಿಸಿದ್ದಾರೆ.
ಗುರು ಶಿಷ್ಯರು, ಅಪೂರ್ವ ಸಂಗಮ, ಗೋಲ್ಮಾಲ್ ಗೋಪಾಲಕೃಷ್ಣ, ನೀನು ನಕ್ಕರೆ ಹಾಲು ಸಕ್ಕರೆ ಹೀಗೆ ಅನೇಕ ಸಿನಿಮಾಗಳಲ್ಲಿ ಪೋಷಕ ಪಾತ್ರ ಹಾಗೂ ಹಾಸ್ಯ ಕಲಾವಿದರಾಗಿ ಬಣ್ಣ ಹಚ್ಚಿ ಕನ್ನಡ ಸಿನಿ ಪ್ರಿಯರ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ.
ಪರಿಶ್ರಮಕ್ಕೆ ಸಿಕ್ಕ ಪ್ರಶಸ್ತಿ
ಪುಟ್ಟಣ್ಣ ಕಣಗಲ್ ರವರು ನಿರ್ದೇಶಿಸಿದ ‘ಕಥಾಸಂಗಮ’ ಚಿತ್ರದ ತಿಮ್ಮರಾಯ ಪಾತ್ರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಯಿಂದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ರಂಗಭೂಮಿಗೆ ಸಲ್ಲಿಸಿದ ಕೊಡುಗೆಗಾಗಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ದೊರಕಿದೆ. ಜೊತೆಗೆ ವಾರದರಾಜ ಪ್ರಶಸ್ತಿ, ನಗರ ಪಾಲಿಕೆ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.