ತಮಿಳು ಡೈರೆಕ್ಟರ್ ವೆಂಕಟ್ ಪ್ರಭು ಜೊತೆ ಕಿಚ್ಚನ ಸಿನಿಮಾ

ಹೊಸ ಸಿನಿಮಾದ ಸುಳಿವು ಕೊಟ್ಟ ನಿರ್ದೇಶಕ ವೆಂಕಟ್ ಪ್ರಭು
ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಮತ್ತು ವಿಕ್ರಾಂತ್ ರೋಣ ಸಿನಿಮಾಗಳು ತಮ್ಮ ಚಿತ್ರೀಕರಣದ ಕೆಲಸ ಮುಗಿಸಿ ಬಿಡುಗಡೆಗೆ ಸಿದ್ದವಾಗಿದೆ. ಚಿತ್ರ ಬಿಡುಗಡೆಗಾಗಿ ಕಿಚ್ಚನ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗ ಮತ್ತೊಂದು ಸುದ್ದಿ ಹೊರಬಂದಿದ್ದು ಕಿಚ್ಚನ ಮುಂದಿನ ಚಿತ್ರದ ಬಗ್ಗೆ ಸುಳಿವು ಸಿಕ್ಕಿದೆ.

ಕನ್ನಡ ಚಿತ್ರ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಚಿತ್ರಗಳಲ್ಲೂ ಅಭಿನಯಿಸಿ ಸೈ ಎನ್ನಿಸಿಕೊಂಡಿರುವ ಕಿಚ್ಚ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕಾಲಿವುಡ್ ಖ್ಯಾತ ನಿರ್ದೇಶರಕಾದ ವೆಂಕಟ್ ಪ್ರಭು ಇತ್ತೀಚೆಗೆ ಸುದೀಪ್ ಅವರ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ವೆಂಕಟ್ ಅವರಿಗೆ ಕಿಚ್ಚ ತಮ್ಮ ಕೈಯಾರೆ ಅಡುಗೆ ಮಾಡಿ ಬಡಿಸಿದ್ದಾರೆ. ವೆಂಕಟ್ ಪ್ರಭು ಅವರು ಸುದೀಪ್ ಜೊತೆ ಇರುವ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದಕ್ಕೆ ಅವರು ನೀಡಿರುವ ಕ್ಯಾಪ್ಷನ್ ಗಮನ ಸೆಳೆಯುತ್ತಿದೆ. ‘ಎಂಥ ಅದ್ಭುತ ಆತಿಥ್ಯ. ಧನ್ಯವಾದಗಳು ಸುದೀಪ್ ಅವರೇ. ನೀವು ಅತ್ಯುತ್ತಮ ಬಾಣಸಿಗ. ನಮ್ಮ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದೇನೆ. ಮುಂಚಿತವಾಗಿಯೇ ಹುಟ್ಟುಹಬ್ಬದ ಶುಭಾಶಯಗಳು’ ಎಂದು ವೆಂಕಟ್ ಪ್ರಭು ಟ್ವೀಟ್ ಮಾಡಿದ್ದಾರೆ.

ನಿರ್ದೇಶಕ ವೆಂಕಟ್ ಪ್ರಭು ಅವರ ಟ್ವಿಟ್ ಮೂಲಕ ವೈರಲ್ ಆಗಿರುವ ಫೋಟೊಗಳಿಂದ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಸುಳಿವು ಸಿಕ್ಕಂತಾಗಿದೆ. ಸೆಪ್ಟಂಬರ್ 2 ರಂದು ಸುದೀಪ್ ಅವರ ಜನ್ಮದಿನವಿದ್ದು ಅವರ ಮುಂದಿನ ಪ್ರಾಜೆಕ್ಟ್ ಗಳು ಅನೌನ್ಸ್ ಆಗುವ ಸಾಧ್ಯತೆ ಇದೆ.
****