News

ಥಿಯೇಟರ್ ಓಪನ್ ಯಾವಾಗ..? ಸರ್ ನಮಗೂ ಬದುಕಿದೆ..!

ಥಿಯೇಟರ್ ಓಪನ್ ಯಾವಾಗ..? ಸರ್ ನಮಗೂ ಬದುಕಿದೆ..!
  • PublishedSeptember 20, 2021

ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಅನ್ನೋ ಮಾತು ಈ ಸಂದರ್ಭಕ್ಕೆ ಹೆಚ್ಚು ಹೊಂದತ್ತೆ ಅನ್ಸತ್ತೆ. ಈ ಮಾತು ಯಾಕೆ ಹೇಳುತ್ತಿದ್ದೀವಿ ಅನ್ಕೊಂಡ್ರಾ ಅದಕ್ಕೆ ಕಾರಣ ಇದೆ. ಅದೇನು ಅಂದ್ರೆ ಕೊರೊನಾ ಎಂಬ ವೈರಾಣು ಕಳೆದೆರಡು ವರ್ಷದಿಂದ ಏನೆಲ್ಲಾ ಅವಾಂತರ ಸೃಷ್ಟಿಸಿತ್ತು ಎಂಬುದನ್ನ ನಾವು ಕಣ್ಣಾರೆ ನೋಡಿದ್ದೇವೆ, ನೋಡಿದ್ದು ಮಾತ್ರವಲ್ಲ ಅದು ಸೃಷ್ಟಿಸಿದ ಭೀಕರತೆಯನ್ನು ಸ್ವತಃ ಅನುಭವಿಸಿದ್ದೇವೆ. ಈಗ ಕೊರೊನಾ ಪ್ರಕರಣಗಳು ಇಳಿಮುಖವಾಗಿ ಬಹುತೇಕ ಆರ್ಥಿಕ ಚಟುವಟಿಕೆಗಳೆಲ್ಲವೂ ತೆರೆದುಕೊಳ್ಳುತ್ತಿವೆ. ಈಗ ಎಲ್ಲವೂ ಮುಕ್ತ ಮುಕ್ತ..! ಆದರೆ ಚಿತ್ರಮಂದಿರಗಳನ್ನು ಸಂಪೂರ್ಣವಾಗಿ ತೆರೆಯಲು ಸರ್ಕಾರ ಯಾಕೆ ಇನ್ನು ಅವಕಾಶ ಕೊಡುತ್ತಿಲ್ಲಾ..? ಎಂಬ ಪ್ರಶ್ನೆ ಸಿನಿಮಾ ಥಿಯೇಟರ್ ಗಳಲ್ಲಿ ಕೆಲಸ ಮಾಡುವ ಕಾರ್ಮಿಕರದ್ದು.

ಲಾಕ್ ಡೌನ್ ನಿಂದಾಗಿ ಇಡೀ ರಾಜ್ಯದ ಜನ ಅದರಲ್ಲೂ ಶ್ರಮಿಕರ ಬದುಕು ಅಕ್ಷರಶಃ ಬೀದಿಗೆ ಬಿದ್ದಂತಾಗಿತ್ತು. ಇಡೀ ರಾಜ್ಯದಲ್ಲಿ ಸಿನಿಮಾ ಮಂದಿರಗಳಲ್ಲಿನ ಕೆಲಸವನ್ನೆ ನಂಬಿಕೊಂಡಿರುವ ಸುಮಾರು 30 ಸಾವಿರ ಕುಟುಂಬಗಳು ತಮ್ಮ ಬದುಕಿಗೆ, ತುತ್ತು ಅನ್ನಕ್ಕಿದ್ದ ಆಸರೆಯನ್ನು ಕಳೆದುಕೊಂಡು ಪಡುತ್ತಿರುವ ಕಷ್ಟ ಒಂದೆರಡಲ್ಲಾ.. ಇದ್ದ ಹಣವೆಲ್ಲ ಖಾಲಿಯಾಗಿ ಬರಿಗೈಯಲ್ಲಿ ಕೂತಿರುವ ಥಿಯೇಟರ್ ನ ಕಾರ್ಮಿಕರು ಬೇಸತ್ತಿದ್ದಾರೆ. ಅವರ ಬದುಕು ಅತ್ತ ಸಾಯಲೂ ಆಗದೆ ಇತ್ತ ಬದುಕಲೂ ಆಗದ ತ್ರಿಶಂಕು ಸ್ಥಿತಿಯಲ್ಲಿದೆ. ನಮಗೊಂದು ನ್ಯಾಯ ಬೇರೆಯವರಿಗೊಂದು ನ್ಯಾಯ ಯಾಕೆ..? ಎಂದು ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಎಲ್ಲವನ್ನು ತೆರೆಯಲು ಅವಕಾಶ ನೀಡಿರುವ ಸರ್ಕಾರ ಥಿಯೇಟರ್ 100% ತೆರೆಯಲು ಮಾತ್ರ ಯಾಕೆ ಅವಕಾಶ ಕೊಡುತ್ತಿಲ್ಲಾ, ಎಲ್ಲಾ ರಂಗಕ್ಕೇ ಒಂದು ನ್ಯಾಯವಾದರೆ ಚಿತ್ರ ರಂಗಕ್ಕೆ ಯಾಕೆ ಈ ಅನ್ಯಾಯ..? ಎಂದು ಕೇಳುತ್ತಿದ್ದಾರೆ.

ಶೇ.100% ಥಿಯೇಟರ್ ಭರ್ತಿಗೆ ಸರ್ಕಾರ ಅವಕಾಶ ನೀಡುವ ವಿಷಯದಲ್ಲಿ ಸರಿಯಾದ ನಿಲುವಿಗೆ ಬಾರದೆ ಇರುವುದರಿಂದ ಥಿಯೇಟರ್ ಕಾರ್ಮಿಕರ ಸಂಕಷ್ಟ ಒಂದು ಕಡೆಯಾದರೆ, ಥಿಯೇಟರ್ 100% ಓಪನ್ ಆದರೆ ಸಾಲು ಸಾಲು ಚಿತ್ರಗಳನ್ನು ಬಿಡುಗಡೆ ಮಾಡಲು ಕಾಯುತ್ತಿರುವ ನಿರ್ಮಾಪಕರು ಮತ್ತೊಂದು ಕಡೆ. ಒಟ್ಟಾರೆ ಚಿತ್ರಮಂದಿರಗಳ ಶೇ.100% ಭರ್ತಿಗೆ ಅವಕಾಶ ನೀಡಿದರೆ ಲಕ್ಷಾಂತರ ಜನರ ಬದುಕನ್ನು ಕಾಪಾಡಿದಂತಾಗುತ್ತದೆ. ಸರ್ಕಾರ ತಕ್ಷಣ ಆ ಕಾರ್ಮಿಕರನ್ನು ಕುರಿತು ಚಿಂತಿಸಬೇಕಿದೆ. ಈ ಹಿನ್ನಲೆಯಲ್ಲಿ ಕನ್ನಡ ಪಿಚ್ಚರ್ ತಂಡ ಕಾರ್ಮಿಕರ ಬಗ್ಗೆ ಕಳಕಳಿಯನ್ನು ಹೊಂದಿದ್ದು, ಈ ಕೂಡಲೇ ಥಿಯೇಟರ್ ಗಳಲ್ಲಿ ಶೇ.100% ರಷ್ಟು ಆಸನ ಭರ್ತಿಗೆ ಅವಕಾಶ ನೀಡಬೇಕೆಂದು ಈ ಅಭಿಯಾನದ ಮೂಲಕ ಕನ್ನಡ ಪಿಚ್ಚರ್ ಸರ್ಕಾರವನ್ನು ಒತ್ತಾಯಿಸುತ್ತದೆ.

Written By
Kannadapichhar

Leave a Reply

Your email address will not be published. Required fields are marked *