ಪುನೀತ್ ರಾಜಕುಮಾರ್ – ಅಶ್ವಿನಿ ಗೆ ‘ಡಿಸೆಂಬರ್ 1’ ಮಹತ್ವದ ದಿನ!
ಇಂದು (ಡಿಸೆಂಬರ್ 1) ಪುನೀತ್ ರಾಜ್‌ಕುಮಾರ್ ಮತ್ತು ಅಶ್ವಿನಿ ಅವರ ವಿವಾಹ ಆದ ದಿನ. ಇದು ಶುಭದಿನ ಆದರೂ ಅದನ್ನು ಸಂಭ್ರಮಿಸುವ ಅದೃಷ್ಟವನ್ನು ವಿಧಿ ಕಿತ್ತುಕೊಂಡು ಬಿಟ್ಟಿದೆ. 1999ರ ಡಿಸೆಂಬರ್ 1ರಂದು ಅಪ್ಪು- ಅಶ್ವಿನಿ ಮದುವೆ ಆಗಿದ್ದಾರೆ. ಈ ಜೋಡಿ ಮದುವೆಯಾಗಿ 22 ವರ್ಷ ಆಯ್ತು. ಜೀವನ ಪರ್ಯಂತ ಜೊತೆಯಾಗಿ ಇರುತ್ತೇನೆ ಎಂದು 22 ವರ್ಷದ ಹಿಂದೆ ಸಪ್ತಪದಿ ತುಳಿದ ಪುನೀತ್ ರಾಜ್‌ಕುಮಾರ್ ಈಗ ಲೋಕವನ್ನೇ ಬಿಟ್ಟು ತೆರಳಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರು ಮೂರನೇ ವ್ಯಕ್ತಿಗಳಿಗೆ ಅಷ್ಟು ಪ್ರೀತಿ ನೀಡುತ್ತಿದ್ದರು. ನಗು ನಗುತ್ತಲೇ ಮಾತನಾಡಿಸುತ್ತಿದ್ದರು. ಹಾಗಿರುವಾಗ ಅವರ ಮನೆಯವರಿಗೆ ಇನ್ನೆಷ್ಟು ಪ್ರೀತಿ ಕೊಟ್ಟಿರ ಬೇಡ ಅಲ್ವಾ. ಅಷ್ಟು ಪ್ರೀತಿಯನ್ನು ಪಡೆದವರು ಈಗ ಅವರ ಆ ನೆನಪುಗಳೊಂದಿಗೆ ಬದುಕಬೇಕಾಗಿದೆ.
ಎಲ್ಲರಂತೆ ಪುನೀತ್ ರಾಜ್‌ಕುಮಾರ್ ಮತ್ತು ಅಶ್ವಿನಿ ಅವರಿಗೂ ವಿವಾಹ ವಾರ್ಷಿಕೋತ್ಸವ ಅಂದರೆ ವಿಶೇಷ. ಅವರು ಕೂಡ ಪ್ರತೀ ವರ್ಷ ವಿಶೇಷವಾಗಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದರು. ಅಷ್ಟಕ್ಕೂ ಅವರು ತಮ್ಮ ಮದುವೆ ವಾರ್ಷಿಕೋತ್ಸವಕ್ಕೆ ಮನೆಯಲ್ಲಿ ಇರುತ್ತಿರಲಿಲ್ಲ. ಸತಿ-ಪತಿ ಇಬ್ಬರು ಪ್ರವಾಸ ಕೈಗೊಳ್ಳುತ್ತಾ ಇದ್ದರು. ವಿಶೇಷವಾದ ಹಲವು ತಾಣಗಳಿಗೆ ಭೇಟಿ ನೀಡಿ, ಪ್ರಪಂಚ ಸುತ್ತಿ ಬರುತ್ತಿದ್ದರು.
ಆದರೆ ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಆ ದಿನಗಳನ್ನು ನೆನೆದು ಸಂತಸ ಪಡುವ ಸ್ಥಿತಿಯಲ್ಲೂ ಇಲ್ಲ ಅಪ್ಪು ಪತ್ನಿ ಅಶ್ವಿನಿ. ಆದರೂ ಆ ಸಂತಸದ ಕ್ಷಣಗಳನ್ನು ನೆನೆದು ಬದುಕು ಸಾಗಿಸುವ ಅನಿವಾರ್ಯತೆ ಅವರ ಮುಂದಿದೆ. ಪುನೀತ್ ಮತ್ತು ಅಶ್ವಿನಿ ಇಲ್ಲಿ ತನಕ ಕೈಗೊಂಡಿರುವ ಕಾರ್ಯಗಳು, ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಅಂಶಗಳು ಮತ್ತೊಬ್ಬರಿಗೆ ಆದರ್ಶ. ಪುನೀತ್ ರಾಜ್‌ಕುಮಾರ್ 22 ವರ್ಷಗಳು ಬಾಳ ದೋಣಿಯಲ್ಲಿ ಪತ್ನಿಗೆ ಜೀವಕ್ಕೆ ಜೀವ ಆಗಿದ್ದರು. ಆದರೆ ಈಗ ಬಾಳ ಪಯಣದಲ್ಲಿ ಅಪ್ಪು ಅಶ್ವಿನಿ ಅವರನ್ನು ಒಂಟಿ ಮಾಡಿ ಹೋಗಿದ್ದಾರೆ. ಆದರೆ ಅಪ್ಪು ಮಾಡಬೇಕಿದ್ದ ಅದೆಷ್ಟೋ ಕಾರ್ಯಗಳನ್ನು ಮಾಡಲು ಅಶ್ವಿನಿ ಅವರು ಮುಂದಾಗಿದ್ದಾರೆ. ಹಾಗಾಗಿ ಅವರಿಗೆ ನೋವು ಸಹಿಸಿಕೊಂಡು ಉತ್ತಮ ಕಾರ್ಯಗಳನ್ನು ಮಾಡುವ ಶಕ್ತಿಯನ್ನು ದೇವರು ನೀಡಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ.
****