ತೆಲುಗು ಗೀತರಚನೆಕಾರ ಸಿರಿವೆನ್ನಲ ಸೀತಾರಾಮ ಶಾಸ್ತ್ರಿ ನಿಧನ, ಕಂಬನಿ ಮಿಡಿದ ಟಾಲಿವುಡ್
ಟಾಲಿವುಡ್ನ ಖ್ಯಾತ ಗೀತರಚನೆಕಾರ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ಅವರು 66ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರು ಹೈದರಾಬಾದ್ನ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಪರಿಸ್ಥಿತಿ ತುಂಬ ಚಿಂತಾಜನಕವಾಗಿತ್ತು. ಈ ಕುರಿತು ಅವರ ಕುಟುಂಬ ಯಾವುದೇ ಮಾಹಿತಿ ನೀಡಿಲ್ಲ.
ಸಿರಿವೆನ್ನೆಲ ಅತಿ ಹೆಚ್ಚು ಧೂಮಪಾನ ಮಾಡುತ್ತಿದ್ದರು, ಇದರಿಂದಾಗಿಯೇ ನ್ಯುಮೋನಿಯ ಬಂದಿದೆ ಎಂದು ಚಿತ್ರರಂಗದಲ್ಲಿ ಮಾತು ಕೇಳಿ ಬರುತ್ತಿದೆ. ರಾತ್ರಿ ಹೊತ್ತಲ್ಲಿ ಮಾತ್ರ ಅವರು ಹಾಡನ್ನು ಬರೆಯುತ್ತಿದ್ದರಂತೆ. ತಡರಾತ್ರಿ ಹಾಡು ಬರೆಯೋದು, ಧೂಮಪಾನ ಅವರ ಅನಾರೋಗ್ಯಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಸಂಬಂಧಿತ ಖಾಯಿಲೆಯಿಂದ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಅಧಿಕೃತ ಪ್ರಕಟಣೆ ಹೊರಡಿಸಿದೆ.
3000ಕ್ಕೂ ಅಧಿಕ ಹಾಡು ಬರೆದಿದ್ದ ಸಿರಿವೆನ್ನೆಲ
1955ರ ಮೇ 20ರಲ್ಲಿ ಜನಿಸಿದ ಸಿರಿವೆನ್ನೆಲ ಅವರು ತೆಲುಗು ಚಿತ್ರರಂಗ, ತೆಲುಗು ರಂಗಭೂಮಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. 11 ನಂದಿ ಅವಾರ್ಡ್ಸ್, 4 ಫಿಲ್ಮ್ಫೇರ್ ಅವಾರ್ಡ್ಸ್ಗಳುಗೆ ಅವರು ಭಾಜನರಾಗಿದ್ದಾರೆ. 2020ರವರೆಗೆ ಅವರು ಒಟ್ಟಾರೆ 3000ಕ್ಕೂ ಅಧಿಕ ಹಾಡು ಬರೆದಿದ್ದರು. 2019ರಲ್ಲಿ ಸಿರಿವೆನ್ನಲ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. ಇತ್ತೀಚಿಗೆ ಅವರು ಹಾಡು ಬರೆದ ಸಿನಿಮಾಗಳೆಂದರೆ ಎಸ್ ಎಸ್ ರಾಜಮೌಳಿ ಅವರ ‘RRR’, ಕ್ರಿಶ್ ಅವರ ‘ಕೊಂಡ ಪೋಲಂ’, ವೆಂಕಟೇಶ್ ಅವರ ‘ನಾರಪ್ಪ’.
ಸಂತಾಪ ಸೂಚಿಸಿದ ಟಾಲಿವುಡ್ ಸೆಲೆಬ್ರಿಟಿಗಳು
ರವಿತೇಜ, ದೇವ ಕಟ್ಟ, ಅಲ್ಲರಿ ನರೇಶ್, ಪ್ರಕಾಶ್ ರಾಜ್, ಶ್ರೀ ವಿಷ್ಣು, ಸಾಯಿ ಧರಂ ತೇಜ ಮುಂತಾದ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.