‘ಪುನೀತ ನಮನ’ ಕಾರ್ಯಕ್ರಮದಲ್ಲಿ ‘ಅಪ್ಪು’ ಗಾಗಿ ಶಿವಣ್ಣನ ಹಾಡು..

ಇಂದು (ನವೆಂಬರ್ 16) ನಡೆದ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಶಿವರಾಜ್ಕುಮಾರ್ ಕಣ್ಣೀರು ಹಾಕಿದ್ದಾರೆ. ಮಾತನಾಡುತ್ತಲೇ ಭಾವುಕರಾಗಿದ್ದಾರೆ. ಪುನೀತ್ ಬದುಕಿದ್ದಾಗ ಅವರಿಗೆ ಹೆಚ್ಚು ಇಷ್ಟವಾಗುತ್ತಿದ್ದ ಪುನೀತ್ ಜೊತೆ ಹಾಡುತ್ತಿದ “ಮೇ ಶಾಹರ್ ತೋ ನಹೀ.. ಮಗರ್ ತೋ ಹೈ ಹಸೀ.. ಎಂಬ ಹಾಡನ್ನು ಹಾಡಿದರು.
‘ಮಾತನಾಡೋಕೆ ತುಂಬಾನೇ ಕಷ್ಟ ಆಗುತ್ತಿದೆ. ಎಲ್ಲರೂ ಅವನ ಬಗ್ಗೆ ಮಾತನಾಡುತ್ತಿದ್ದಾರೆ. ಅವನ ಬಗ್ಗೆ ಮಾತನಾಡೋಕೆ ಏನೂ ಉಳಿದಿಲ್ಲ. ಅವನ ಬಗ್ಗೆ ಮಾತನಾಡಿ ಮಾತನಾಡಿ ನನ್ನ ದೃಷ್ಟಿಯೇ ಅವನಿಗೆ ಬಿದ್ದು ಹೋಯ್ತೇನೋ ಅನಿಸುತ್ತದೆ. ಎಲ್ಲರೂ ಯಾಕೆ ಅಷ್ಟೊಂದು ಹೊಗಳ್ತೀಯಾ ಎಂದು ಕೇಳುತ್ತಿದ್ದರು. ಅವನಿಗೆ ಹೊಗಳಿಸಿಕೊಳ್ಳುವ ಅರ್ಹತೆ ಇದೆ. ನನಗೆ ನಟನೆಯಲ್ಲಿ ಆಸಕ್ತಿ ಇರಲಿಲ್ಲ. ಆದರೆ, ಪುನೀತ್ನಿಂದ ಸ್ಫೂರ್ತಿ ತೆಗೆದುಕೊಂಡೆ. ಶಿವಣ್ಣ ನನ್ನ ಸ್ಫೂರ್ತಿ ಅಂತ ಅಪ್ಪು ಹೇಳ್ತಾನೆ. ಆದರೆ, ಹಾಗಲ್ಲ. ಹೀಗೆ ಹೇಳೋದು ಅವನ ದೊಡ್ಡ ಗುಣ ಅಷ್ಟೆ’ ಎಂದು ಭಾವುಕರಾದರು ಶಿವರಾಜ್ಕುಮಾರ್.
‘ಸಾಮಾಜಿಕ ಕೆಲಸವನ್ನು ಇಷ್ಟೊಂದು ಮಾಡಿದಾನೆ. ನನ್ನ ಹತ್ತಿರ ಕಾರು ತಗೋ ಅಂತಿದ್ದ. ನನ್ನ ತಮ್ಮ ರಾಯಲ್ ಆಗಿ ಹುಟ್ಟಿದಾನೆ, ರಾಯಲ್ ಆಗಿ ಇರ್ತಾನೆ ಎಂದು ಹೇಳ್ತಿದ್ದೆ. ದೇವರು ಅದಕ್ಕೆ ಅವಕಾಶ ನೀಡಲಿಲ್ಲ. ಇನ್ನುಮುಂದೆ ಅವನನ್ನು ಜೀವಂತವಾಗಿರಿಸಿಕೊಳ್ಳೋಕೆ ಪ್ರಯತ್ನ ಮಾಡಬೇಕು. ಅವನಿಗೆ ದೀಪ ಹಚ್ಚೋದು ನನಗೆ ಇಷ್ಟವಿಲ್ಲ. ಜಾಸ್ತಿ ಮಾತು ಬೇಡ. ನಾನು ಹಾಗೂ ರಾಘು ಅತ್ತಿದ್ದು ನೋಡಿದ್ರೆ ಅಪ್ಪು ತುಂಬಾನೇ ಬೇಸರ ವ್ಯಕ್ತಪಡಿಸುತ್ತಿದ್ದ. ಎಲ್ಲರೂ ಒಂದು ದಿನ ಹೋಗಬೇಕು. ಆದರೆ ಇಷ್ಟು ಬೇಗನೆ ಹೋಗಬೇಕಿತ್ತಾ? ಎಲ್ಲರೂ ನೀಡುತ್ತಿರುವ ಬೆಂಬಲ ನೋಡಿದ್ರೆ ಖುಷಿ ಆಗುತ್ತಿದೆ’ ಎಂದಿದ್ದಾರೆ ಶಿವಣ್ಣ.
ಪುನೀತ್ ಅವರನ್ನು ಸಹೋದರನಂತೆ ಕಂಡಿದ್ದರು ತಮಿಳು ನಟ ವಿಶಾಲ್. ವಿಶೇಷ ಎಂದರೆ, ವಿಶಾಲ್ ನೋಡಿದಾಗೆಲ್ಲ ಶಿವರಾಜ್ಕುಮಾರ್ ಅವರಿಗೆ ಪುನೀತ್ ನೆನಪು ಕಾಡುತ್ತದೆಯಂತೆ. ‘ವಿಶಾಲ್ ನೋಡಿದಾಗ ನನ್ನ ತಮ್ಮನ್ನು ನೋಡಿದ ಹಾಗೆ ಆಗುತ್ತೆ ಎಂದು ಅವಾಗಲೇ ಹೇಳಿದ್ದೆ. ಇವತ್ತು ಹಾಗೆಯೇ ಅನಿಸಿತು’ ಎಂದರು ಶಿವರಾಜ್ಕುಮಾರ್. ಇದರ ಜೊತೆಗೆ ಧ್ರುವ, ಸುದೀಪ್, ವಿಜಯ್, ದರ್ಶನ್,ಗಣೇಶ್, ಯಶ್ ಇವರೆಲ್ಲರಲ್ಲಿ ನನ್ನ ತಮ್ಮನನ್ನು ನೋಡ್ತೀನಿ ಎಂದು ಭಾವುಕರಾದ್ರು. ಪುನೀತ್ ಬದುಕಿದ್ದಾಗ ಅವರಿಗೆ ಹೆಚ್ಚು ಇಷ್ಟವಾಗುತ್ತಿದ್ದ ಪುನೀತ್ ಜೊತೆ ಹಾಡುತ್ತಿದ “ಮೇ ಶಾಹರ್ ತೋ ನಹೀ.. ಮಗರ್ ತೋ ಹೈ ಹಸೀ.. ಎಂಬ ಹಾಡನ್ನು ಹಾಡಿದರು.
****