News

ಹೆಸರಾಂತ ಪೋಷಕ ನಟ ಸತ್ಯಜಿತ್ ನಿಧನ

ಹೆಸರಾಂತ ಪೋಷಕ ನಟ ಸತ್ಯಜಿತ್ ನಿಧನ
  • PublishedOctober 10, 2021

ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸತ್ಯಜಿತ್ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಚೇತರಿಸಿಕೊಳ್ಳದ ನಟ ಸತ್ಯಜಿತ್ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.

ಕಳೆದ ಹಲವು ತಿಂಗಳುಗಳಿಂದಲೂ ನಟ ಸತ್ಯಜಿತ್‌ಗೆ ತೀವ್ರ ಅನಾರೋಗ್ಯ ಬಾಧಿಸುತ್ತಲೇ ಇತ್ತು. ಈ ಹಿಂದೆ ಗ್ಯಾಂಗ್ರಿನ್‌ನಿಂದಾಗಿ ನಟ ಸತ್ಯಜಿತ್ ಅವರ ಒಂದು ಕಾಲನ್ನು ಕತ್ತರಿಸಲಾಗಿತ್ತು. ಕೆಲ ದಿನಗಳ ಹಿಂದೆ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೌರಿಂಗ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ನಟ ಸತ್ಯಜಿತ್‌ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗಲಿಲ್ಲ. ಅನಾರೋಗ್ಯದಿಂದ ನಟ ಸತ್ಯಜಿತ್ ಚೇತರಿಸಿಕೊಳ್ಳಲಿಲ್ಲ. ಮಧ್ಯರಾತ್ರಿ (ಅಕ್ಟೋಬರ್ 10) 2 ಗಂಟೆ ಸುಮಾರಿಗೆ ನಟ ಸತ್ಯಜಿತ್ ಕೊನೆಯುಸಿರೆಳೆದಿದ್ದಾರೆ.

ಬೌರಿಂಗ್ ಆಸ್ಪತ್ರೆಯಿಂದ ಮನೆಗೆ ನಟ ಸತ್ಯಜಿತ್ ಅವರ ಪಾರ್ಥೀವ ಶರೀರವನ್ನು ತರಲಾಗುತ್ತಿದ್ದು, ಶಬರಿ ನಗರದ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಮಧ್ಯಾಹ್ನ 1.30ರ ಸುಮಾರಿಗೆ ನಟ ಸತ್ಯಜಿತ್ ಅವರ ಅಂತ್ಯಕ್ರಿಯೆ ನಡೆಯಲಿದೆ.

650ಕ್ಕೂ ಅಧಿಕ ಚಿತ್ರಗಳಲ್ಲಿ ನಟನೆ

ನಟ ಸತ್ಯಜಿತ್ ಅವರ ನಿಜನಾಮ ಸಯ್ಯದ್ ನಿಜಾಮುದ್ದೀನ್. ಚಿಕ್ಕವಯಸ್ಸಿನಿಂದಲೇ ಅಭಿನಯದಲ್ಲಿ ಆಸಕ್ತಿ ಮೂಡಿಸಿಕೊಂಡ ಸಯ್ಯದ್ ನಿಜಾಮುದ್ದೀನ್ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದರು. ಒಂದ್ಕಾಲದಲ್ಲಿ ಬಹುಬೇಡಿಕೆಯ ಪೋಷಕ ನಟನಾಗಿದ್ದ ನಟ ಸತ್ಯಜಿತ್ 650ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟ ಸತ್ಯಜಿತ್ ಪೋಷಕ ಪಾತ್ರ ಹಾಗೂ ನೆಗೆಟಿವ್ ಪಾತ್ರಗಳಲ್ಲಿ ಹೆಚ್ಚು ಗಮನ ಸೆಳೆದಿದ್ದರು.

ಅರುಣ ರಾಗ’, ‘ಅಂತಿಮ ತೀರ್ಪು’, ‘ಶಿವ ಮೆಚ್ಚಿದ ಕಣ್ಣಪ್ಪ’, ‘ರಣರಂಗ’, ‘ನಮ್ಮೂರ ರಾಜ’, ‘ನ್ಯಾಯಕ್ಕಾಗಿ ನಾನು’, ‘ಯುದ್ಧಕಾಂಡ’, ‘ಇಂದ್ರಜಿತ್’, ‘ನಮ್ಮೂರ ಹಮ್ಮೀರ’, ‘ಪೊಲೀಸ್ ಲಾಕಪ್’, ‘ಮನೆದೇವ್ರು’, ‘ಮಂಡ್ಯದ ಗಂಡು’, ‘ಪೊಲೀಸ್ ಸ್ಟೋರಿ’, ‘ಸರ್ಕಲ್ ಇನ್ಸ್‌ಪೆಕ್ಟರ್’, ‘ಪಟೇಲ’, ‘ದುರ್ಗದ ಹುಲಿ’, ‘ಅಪ್ಪು’, ‘ಧಮ್’, ‘ಅಭಿ’, ‘ಆಪ್ತಮಿತ್ರ’, ‘ಅರಸು’, ‘ಇಂದ್ರ’, ‘ಭಾಗ್ಯದ ಬಳೇಗಾರ’, ‘ಕಲ್ಪನಾ’, ‘ಗಾಡ್ ಫಾದರ್’, ‘ಲಕ್ಕಿ’, ‘ಉಪ್ಪಿ 2’, ‘ಮಾಣಿಕ್ಯ’, ‘ರನ್ನ’, ‘ರಣವಿಕ್ರಮ’, ‘ಮೈತ್ರಿ’ ಮುಂತಾದ ಹಲವು ಚಿತ್ರಗಳಲ್ಲಿ ಸತ್ಯಜಿತ್ ನಟಿಸಿದ್ದಾರೆ.

ಗ್ಯಾಂಗ್ರಿನ್‌ನಿಂದಾಗಿ ಒಂದು ಕಾಲು ಕಳೆದುಕೊಂಡ ನಂತರ ವೀಲ್ ಚೇರ್‌ ಮೇಲೆ ಕುಳಿತುಕೊಂಡೇ ರಿಯಲ್ ಸ್ಟಾರ್ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ನಟನೆಯ ‘ಸೆಕೆಂಡ್ ಹಾಫ್’ ಸಿನಿಮಾದಲ್ಲಿ ನಟ ಸತ್ಯಜಿತ್ ನಟಿಸಿದ್ದರು. ಯಾವುದೇ ಪಾತ್ರ ಕೊಟ್ಟರೂ ಸಲೀಸಾಗಿ ಅಭಿನಯಿಸುತ್ತಿದ್ದ ನಟ ಸತ್ಯಜಿತ್ ಈಗ ಬಾರದ ಲೋಕಕ್ಕೆ ತೆರಳಿದ್ದಾರೆ. ನಟ ಸತ್ಯಜಿತ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ನಟ ನಟಿಯರು ಕಂಬನಿ ಮಿಡಿದಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *