ಭಜರಂಗಿ 2 ಅಪ್ಪು ಗೆ ಅರ್ಪಣೆ ಎಂದ ಶಿವಣ್ಣ!

ನಟ ಶಿವರಾಜ್ಕುಮಾರ್ ಮತ್ತು ನಿರ್ದೇಶಕ ಹರ್ಷ ಕಾಂಬಿನೇಷನ್ನಲ್ಲಿ ಮೂಡಿ ಬಂದ ‘ಭಜರಂಗಿ 2’ ಸಿನಿಮಾ ಜನ ಮೆಚ್ಚುಗೆ ಪಡೆದುಕೊಂಡಿತ್ತು. ಫ್ಯಾಮಿಲಿ ಆಡಿಯನ್ಸ್ಗೆ ಈ ಸಿನಿಮಾ ಇಷ್ಟವಾಗಿತ್ತು. ಈಗ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಶಿವರಾಜ್ಕುಮಾರ್ ಅವರು ಪುನೀತ್ಗೆ ಅರ್ಪಿಸಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಶಿವರಾಜ್ಕುಮಾರ್, ‘ನನ್ನ ನಟನೆಯ ‘ಭಜರಂಗಿ 2’ ಸಿನಿಮಾ ಜೀ 5 ನಲ್ಲಿ ರಿಲೀಸ್ ಆಗುತ್ತಿದೆ. ನಾನು ಹಾಗೂ ನನ್ನ ತಂಡ ಈ ಸಿನಿಮಾವನ್ನು ಅಪ್ಪುಗೆ ಡೆಡಿಕೇಟ್ ಮಾಡುತ್ತೇವೆ. ಇದು ಅಪ್ಪು ಎಡಿಟಿಂಗ್ ರೂಮ್ನಲ್ಲೇ ಎಡಿಟ್ ಮಾಡಿದ ಚಿತ್ರ. ಸಾಕಷ್ಟು ಬಾರಿ ಅವನು ಸಿನಿಮಾದ ದೃಶ್ಯ ನೋಡಿ ಮೆಚ್ಚುಗೆಯ ಮಾತನಾಡಿದ್ದ. ಪ್ರೀ ರಿಲೀಸಿಂಗ್ ಇವೆಂಟ್ಗೂ ಅಪ್ಪು ಬಂದು ಬೆಂಬಲಿಸಿದ್ದರು. ಡ್ಯಾನ್ಸ್ ಮಾಡಿದ್ದರು. ರಿಲೀಸ್ ಆದ ದಿನವೂ ಬೆಳಗ್ಗೆ ಟ್ವೀಟ್ ಮಾಡಿ ಶುಭಕೋರಿದ್ದರು. ಸಿನಿಮಾದ ಸಾಕಷ್ಟು ದೃಶ್ಯಗಳು ಅಪ್ಪು ಅವರನ್ನು ನೆನಪಿಸುತ್ತವೆ’ ಎಂದು ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ.

ಅ.29ರಂದು ಅದ್ದೂರಿಯಾಗಿ ‘ಭಜರಂಗಿ 2’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿತ್ತು. ಮುಂಜಾನೆ ಅನೇಕ ಕಡೆಗಳಲ್ಲಿ ಶೋ ಆರಂಭವಾಗಿತ್ತು. ಎಲ್ಲೆಡೆ ಹೌಸ್ ಫುಲ್ ಪ್ರದರ್ಶನವಾಗಿ, ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿರುವುದು ನೋಡಿ ಇಡೀ ತಂಡಕ್ಕೆ ಖುಷಿ ಆಗಿತ್ತು. ಕೆಲವು ಚಿತ್ರಮಂದಿರಗಳಿಗೆ ಶಿವಣ್ಣ ಭೇಟಿ ನೀಡಿದ್ದರು. ಅದಾಗಿ ಕೆಲವೇ ಗಂಟೆಗಳು ಕಳೆಯುವುದರೊಳಗೆ ಕನ್ನಡ ಚಿತ್ರರಂಗದ ಪಾಲಿಗೆ ಕಹಿ ಸುದ್ದಿಯೊಂದು ಸಿಡಿಲಿನಂತೆ ಬಂದೆರಗಿತ್ತು. ಪುನೀತ್ ರಾಜ್ಕುಮಾರ್ ಹೃದಯಾಘಾತದಿಂದ ನಿಧನರಾದರು ಎಂಬ ಸುದ್ದಿ ಕೇಳಿ ಎಲ್ಲವೂ ಸ್ತಬ್ದವಾದಂತಾಗಿತ್ತು. ಆ ಘಟನೆ ಬಳಿಕ ಚಿತ್ರಮಂದಿರದ ಕಡೆಗೆ ಬರಲು ಬಹುತೇಕರು ಹಿಂದೇಟು ಹಾಕಿದ್ದರು.
****