News

ಸರ್ಕಾರಿ ಶಾಲೆ ಉಳಿಸಿ ಅಭಿಯಾನಕ್ಕೆ ಕೈ ಜೋಡಿಸಿದ ನಟಿ ನೀತು!

ಸರ್ಕಾರಿ ಶಾಲೆ ಉಳಿಸಿ ಅಭಿಯಾನಕ್ಕೆ ಕೈ ಜೋಡಿಸಿದ ನಟಿ ನೀತು!
  • PublishedNovember 30, 2021

ನಟಿ ನೀತು ಶೆಟ್ಟಿ ಚಿತ್ರರಂಗದಿಂದ ಕೊಂಚ ದೂರವಿದ್ದರೂ ತಮ್ಮ ಸಾಮಾಜಿಕ ಕಾರ್ಯಗಳಿಂದ  ಸದಾ ಜನರ ಹತ್ತಿರವೇ ಇರುತ್ತಾರೆ, ಕೊರೊನಾ ಸಂದರ್ಭದಲ್ಲಿ ಉಸಿರು ತಂಡದೊಂದಿಗೆ ಕೈಜೋಡಿಸಿ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಸಿಲೀಂಡರ್ ಪೂರೈಸುವ ಮತ್ತು ಕೊಡಗು,ಚಾಮರಾಜನಗರದ ಜಿಲ್ಲೆಯ ಹಾಡಿ ಜನರಿಗೆ ಆಹಾರ ಪದಾರ್ಥ ಮತ್ತು ಗುಡಿಸಲುಗಳಿಗೆ ಮಳೆಯಿಂದ ರಕ್ಷಣೆಗಾಗಿ ಟಾರ್ಪಲ್ ಹೊದಿಕೆಗಳನ್ನು ಹಾಕಿಕೊಡುವ ಮೂಲಕ ಸಹಾಯ ಮಾಡಿದ್ದರು. ನೀತು ಸದಾ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ  ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ನಟಿ, ತಮ್ಮ ಜೀವನದ ಅಪ್ಡೇಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಮಹತ್ವದ ಅಭಿಯಾನಕ್ಕೆ ಜನ ಸಾಮಾನ್ಯರ ಜೊತೆ ಕೈ ಜೋಡಿಸಿದ್ದಾರೆ.

ಕರ್ನಾಟಕ ರಾಜ್ಯಾದ್ಯಂತ 9 ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿದು, ಆಯಾ ಶಾಲೆಗಳಿಗೆ ಅಗತ್ಯವಿರುವ ನೀರು, ಟಾಯ್ಲೆಟ್ ಸೇರಿ ಇತರೆ ಎಲ್ಲ ಮೂಲ ಸೌಕರ್ಯಗಳನ್ನು ನೀಡಿ ಹಳೇ ಶಾಲಾ ಕಟ್ಟಡಕ್ಕೆ ಹೊಸ ಮೆರಗು ನೀಡಿದ್ದಾರೆ. ಶಾಲೆಗಳನ್ನು ಉಳಿಸಿ ಎನ್ನುವ ಅಭಿಯಾನ ಆರಂಭಿಸಿದ್ದು, ಸರಕಾರ ವಿದ್ಯಾರ್ಥಿಗಳು ಕಡಿಮೆ ಇರುವ ಶಾಲೆಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾದರೆ, ನಟಿ ಅವನ್ನು ಉಳಿಸಲು ಶ್ರಮಿಸುತ್ತಿದ್ದಾರೆ. ನಾಡಪ್ರಭು ಕೆಂಪೇಗೌಡರ ತವರೂರದಾದ ಮಾಗಡಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ 13 ಕೊಠಡಿಗಳನ್ನು ನಟಿ ನೀತು ಮತ್ತು ಕನ್ನಡ ಮನಸ್ಸುಗಳು ಪ್ರತಿಷ್ಠಾನ ತಂಡದವರು ಬಣ್ಣ ಬಳಿದು ,ಸುಂದರಗೊಳಿಸಿದ್ದಾರೆ. ಇದರ ಜೊತೆಗೆ ಇವರ ಅಭಿಯಾನಕ್ಕೆ ಹೂವಿನಹೊಳೆ ಪ್ರತಿಷ್ಠಾನ ಮತ್ತು ರಿವರ್ಬೆಡ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸೂರ್ಯ ಫೌಂಡೇಶನ್‌ ಅವರು ಸರ್ಕಾರಿ ಪದವಿ ಪೂರ್ವ ಕಾಲೇಜ್‌ ನ ದತ್ತು ಪಡೆದುಕೊಂಡು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. 

ಕರ್ನಾಟಕ ರಾಜ್ಯದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸರ್ಕಾರಿ ಶಾಲೆಗಳನ್ನು ನೀತು ಮತ್ತು ತಂಡ ಗುರುತಿಸಿ ಸುಮಾರು 5 ಲಕ್ಷ ವೆಚ್ಚದಲ್ಲಿ ಸುಣ್ಣ ಬಣ್ಣ ಮತ್ತು ಅಗತ್ಯವಿರುವ ವಸ್ತುಗಳನ್ನು ನೀಡುವ ವ್ಯವಸ್ಥೆ ಮಾಡುತ್ತಿದ್ದಾರಂತೆ. ‘ಕನ್ನಡ ಮನಸ್ಸುಗಳ ಪ್ರತಿಷ್ಠಾನ ಅವರು ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಈ ಅಭಿಯಾನ ಹಮ್ಮಿಕೊಂಡಿದ್ದಾರೆ. ಈಗಾಗಲೇ 9 ಶಾಲೆಗಳನ್ನು ಗುರುತಿಸಿ, ಶಾಲೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ಶಾಲೆ ಉಳಿವಿಗೆ ಶ್ರಮಿಸಿದ್ದಾರೆ. ಸರ್ಕಾರ ಶಾಲೆ ಉಳಿಸಿ ಅಭಿಯಾನದಲ್ಲಿ ಪಾಲ್ಗೊಂಡು ಶಾಲೆಯ ಕೊಠಡಿಗೆ ಬಣ್ಣ ಬಳಿದ ನನಗೆ ತುಂಬಾ ಖುಷಿಯಾಗಿದೆ ಮುಂದೆಯೂ ಕನ್ನಡ ಮನಸ್ಸುಗಳನ್ನು ಸೇರಿಸಿಕೊಂಡು, ಇಂಥ ಕಾರ್ಯಗಳನ್ನು ಹಮ್ಮಿಕೊಳ್ಳುವ ಸಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ,’ ಎಂದು ನೀತು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನಲ್ಲಿ ಮಾತನಾಡಿದ್ದಾರೆ. 

‘ಈ ಅಭಿಯಾನದಲ್ಲಿ ಭಾಗವಹಿಸುವಂತೆ ಸ್ನೇಹಿತರು ಮನವಿ ಮಾಡಿದ್ದರು. ಆದರೆ ನಾನಾ ಕಾರಣಗಳಿಂದ ಭಾಗವಹಿಸಲು ಸಾಧ್ಯವಾಗರಲಿಲ್ಲ. ಇಂದು ಬೆಂಗಳೂರು ಸಮೀಪವೇ ಕಾರ್ಯಕ್ರಮ ಹಮ್ಮಿಕೊಂಡ ಕಾರಣ ಅಭಿಯಾನದಲ್ಲಿ ಪಾಲ್ಗೊಂಡೆ. ಸಿಗಂದೂರು, ಕಾಸರಗೋಡು ಸೇರಿದಂತೆ 9 ಶಾಲೆಗಳ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇದ್ದಿದ್ದಕ್ಕೆ ಬೇಸರವಾಗಿದೆ. ಶಾಲೆ ಉಳಿಸುವ ಕರ್ತವ್ಯವನ್ನು ನಿರ್ವಹಿಸಲು ಸರ್ಕಾರಗಳು ಯಾರಿಂದಲೂ ಹೇಳಿಸಿಕೊಳ್ಳಬಾರದು. ಅಧಿಕಾರದಲ್ಲಿ ಯಾವುದೇ ಪಕ್ಷದ ಸರ್ಕಾರವಿರಲಿ, ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದರೆ ಮಕ್ಕಳು ಸರ್ಕಾರಿ ಶಾಲೆಗೆ ಬರುತ್ತಾರೆ. ಖಾಸಗಿ ಶಾಲೆಗಳ ಅಭಿವೃದ್ಧಿಯನ್ನು ಅಡಳಿತ ಮಂಡಳಿ ಮಾಡುತ್ತವೆ, ಸರ್ಕಾರಿ ಶಾಲೆಗಳು ಅಭಿವೃದ್ಧಿಯಲ್ಲಿ ಕಡೆಗಣನೆಯಾಗುತ್ತವೆ. ಯಾವ ಕಾರಣಕ್ಕೂ ಸರ್ಕಾರಿ ಶಾಲೆಗಳಿಗೆ ತಾರತಮ್ಯ ಮಾಡಬಾರದು, ‘ ಎಂದು ನೀತು ಮಾತನಾಡಿದ್ದಾರೆ.

ಕೊರೋನಾ ಸಂದರ್ಭದಲ್ಲಿ ಹೆಚ್ಚು ಸಂಕಷ್ಟ ಅನುಭವಿಸಿದ ಕ್ಷೇತ್ರ ಶಿಕ್ಷಣ. ಮಕ್ಕಳಿಂದ ಸಾವಿರಾರು ರೂಪಾಯಿ ಸುಲಿಗೆ ಮಾಡಿ, ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡದೇ, ಆನ್‌ಲೈನ್ ತರಗತಿ ನಡೆಸಿದರೂ ವ್ಯಾನ್, ಸಮವಸ್ತ್ರ ಫೀ ಪಡೆದ ಖಾಸಗಿ ಶಿಕ್ಷಣ ಸಂಸ್ಥೆಗಳು ಬಡವರ ರಕ್ತ ಹೀರಿದೆ. ಈ ನಿಟ್ಟಿನಲ್ಲಿ ಅನೇಕ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ನೋಂದಾಯಿಸಿದ್ದು, ಮುಂಚಿಗಿಂತ ಇದೀಗ ಸರಕಾರಿ ಶಾಲೆಗಳ ಬೇಡಿಕೆಗೆ ಹೆಚ್ಚಾಗಿದೆ. ಇನ್ನಾದರೂ ಸರಕಾರ ಈ ಸರಕಾರಿ ಶಾಲೆಗಳ ಪೋಷಣೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂಬುವುದು ಎಲ್ಲರ ಆಶಯ.

****

Written By
Kannadapichhar

Leave a Reply

Your email address will not be published. Required fields are marked *