News

ಇಂದು ಅಂಬರೀಷ್ ಅವರ 3ನೇ ವರ್ಷದ ಪುಣ್ಯ ಸ್ಮರಣೆ

ಇಂದು ಅಂಬರೀಷ್ ಅವರ 3ನೇ ವರ್ಷದ ಪುಣ್ಯ ಸ್ಮರಣೆ
  • PublishedNovember 24, 2021

ರೆಬಲ್ ಸ್ಟಾರ್ ಅಂಬರೀಷ್ ಅವರನ್ನು ಕಳೆದುಕೊಂಡು ಇಂದಿಗೆ 3 ವರ್ಷ ಕಳೆದಿವೆ. ಅಂಬರೀಷ್​ ಅವರು 2018ರ ನವೆಂಬರ್​ 24ರಂದು ನಿಧನರಾದರು. ಇಂದು ಅಂಬರೀಷ್ ಅವರ ಪುಣ್ಯಸ್ಮರಣೆ. ಅಂಬಿ ಇಲ್ಲದೆ ಮೂರು ವರ್ಷ ಕಳೆದು ಹೋಗಿದೆ. ಅವರನ್ನು ಕಳೆದುಕೊಂಡ ನೋವು ಇನ್ನೂ ಕಡಿಮೆ ಆಗಿಲ್ಲ. ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಅಂಬರೀಷ್​ ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಅಂಬರೀಷ್​ ಸಮಾಧಿಗೆ ಇಂದು ಕುಟುಂಬದವರು, ಆಪ್ತರು, ಅಭಿಮಾನಿಗಳು ಭೇಟಿ ನೀಡಲಿದ್ದಾರೆ. 

ನವೆಂಬರ್​ 24ರಂದು ಅಂಬರೀಷ್​ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು. ಅವರನ್ನು ಕಳೆದುಕೊಂಡಿದ್ದ ದಿನ ಇಡೀ ಕನ್ನಡ ಚಿತ್ರರಂಗ ದುಃಖದಲ್ಲಿ ಮುಳುಗಿತ್ತು. ಕಂಠೀರವ ಸ್ಟುಡಿಯೋದಲ್ಲಿ ಅವರ ಅಂತ್ಯಸಂಸ್ಕಾರ ಮಾಡಲಾಯಿತು. ಈ ವೇಳೆ ದರ್ಶನ್ ಮತ್ತು ಯಶ್​ ಅಂಬರೀಷ್ ಅವರ ಪಾರ್ಥಿವ ಶರೀರದ ಪಕ್ಕದಲ್ಲೆ ಇದ್ದು ಸುಮಲತಾ ಅವರಿಗೆ ಧೈರ್ಯ ತುಂಬಿದ್ದರು. ಸುದೀಪ್ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಆಗಮಿಸಿದ್ದರು. ಅಂಬರೀಷ್​ ಅವರನ್ನು ಇಂದು ನೆನಪು ಮಾಡಿಕೊಳ್ಳುವ ಕಾರ್ಯ ನಡೆಯುತ್ತಿದೆ.

ಕಳೆದ ಅಕ್ಟೋಬರ್ 29 ರಂದು ನಿಧನರಾದ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ “ಕರ್ನಾಟಕ ರತ್ನ” ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ಘೋಷಿಸಿತ್ತು. ಈಗ ಅದೇ ರೀತಿ ‘ರೆಬೆಲ್​ ಸ್ಟಾರ್​’ ಅಂಬರೀಷ್ ಅವರಿಗೂ ಇಂಥ ಗೌರವಗಳು ಸಲ್ಲಬೇಕು ಎಂದು ಅಂಬಿ ಪ್ಯಾನ್ಸ್​ ಬೇಡಿಕೆ ಇಡುತ್ತಿದ್ದಾರೆ. ಅದಕ್ಕಾಗಿ ಅವರು ಹೋರಾಟ ಮಾಡುವುದಾಗಿ ಹೇಳಿದ್ದು, ಅದು ಸುಮಲತಾ ಅಂಬರೀಷ್​ ಗಮನಕ್ಕೆ ಬಂದಿತ್ತು. ಆ ಬಗ್ಗೆ ಅವರು ಬಹಿರಂಗವಾಗಿ ಪತ್ರ ಬರೆದಿದ್ದು, ಅಭಿಮಾನಿಗಳ ಕೆಲವು ನಿರ್ಧಾರಗಳಿಗೆ ಬೇಸರ ವ್ಯಕ್ತಪಡಿಸಿದ್ದರು. ಅಂಬಿ ಅಭಿಮಾನಿಗಳಿಗೆ ಕೆಲವು ಕಿವಿಮಾತುಗಳನ್ನು ಅವರು ಹೇಳಿ ಹೋರಾಟ ಕೈಬಿಡುವಂತೆ ಮನವಿ ಮಾಡಿದ್ದರು. ಅಭಿಮಾನಿಗಳ ಪ್ರೀತಿ ಮುಂದೆ ಯಾವ ಪ್ರಶಸ್ತಿಯೂ ದೊಡ್ಡದಲ್ಲ ಎಂದಿದ್ದರು.

‘ನಾಗರಹಾವು’ (1972) ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು ಅಂಬರೀಷ್​. ಹೀರೋ ಆಗಿ, ಖಳ ನಟನಾಗಿ ಮತ್ತು ಪೋಷಕ ಪಾತ್ರದ ಮೂಲಕ ಗುರುತಿಸಿಕೊಂಡರು. ರೆಬೆಲ್ ಸ್ಟಾರ್, ಮಂಡ್ಯದ ಗಂಡು ಎಂಬಿತ್ಯಾದಿ ಹೆಸರುಗಳ ಮೂಲಕ ಗುರುತಿಸಿಕೊಂಡರು ಅವರು​. ಅಂಬರೀಷ್​ ಅವರು ನಂತರ ರಾಜಕೀಯದಲ್ಲೂ ತೊಡಗಿಕೊಂಡರು. ಮೇ 2013ರಿಂದ ಜೂನ್ 2016ರವರೆಗೆ ಸಿದ್ದರಾಮಯ್ಯ ಸಂಪುಟದಲ್ಲಿ ವಸತಿ ಸಚಿವರಾಗಿ ಅಂಬರೀಷ್​ ಕಾರ್ಯನಿರ್ವಹಿಸಿದ್ದರು. ಅಂಬರೀಷ್​ಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು 63ನೇ ವಾರ್ಷಿಕ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದು ವಿಶೇಷ.

ಸುಮಲತಾ ಅಂಬರೀಷ್​ ಹಾಗೂ ಅಭಿಷೇಕ್​ ಅಂಬರೀಷ್​ ಅವರು ಇಂದು ಅಂಬರೀಷ್​ ಸಮಾಧಿಗೆ ಭೇಟಿ ನೀಡಿ ಪೂಜೆ ಮಾಡುವ ಸಾಧ್ಯತೆ ಇದೆ. ಅಭಿಮಾನಿಗಳು ಕೂಡ ಕಂಠೀರವ ಸ್ಟುಡಿಯೋಗೆ ಆಗಮಿಸುತ್ತಿದ್ದಾರೆ. ಇನ್ನು, ಅಭಿಮಾನಿಗಳು ಅಂಬಿ ಹೆಸರಲ್ಲಿ ಸಾಕಷ್ಟು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ಅಂಬರೀಷ್​ ಅವರನ್ನು ಭಿನ್ನವಾಗಿ ನೆನಪಿಸಿಕೊಳ್ಳಲಾಗುತ್ತಿದೆ.

****

Written By
Kannadapichhar

Leave a Reply

Your email address will not be published. Required fields are marked *