ಕಿರುತೆರೆಯ ಜನಪ್ರಿಯ ಧಾರಾವಾಹಿ ‘ರಾಮಾಯಣ’ದ ರಾವಣ ಅರವಿಂದ ತ್ರಿವೇದಿ ನಿಧನ..!

ರಮಾನಂದ್ ಸಾಗರ್ ಅವರ ಅತ್ಯಂತ ಜನಪ್ರಿಯ ಪೌರಾಣಿಕ ಧಾರಾವಾಹಿ ‘ರಾಮಾಯಣದಲ್ಲಿ ರಾವಣನ ಪಾತ್ರವನ್ನು ನಿರ್ವಹಿಸಿದ್ದ ಅರವಿಂದ ತ್ರಿವೇದಿ ಜಗತ್ತಿಗೆ ವಿದಾಯ ಹೇಳಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. ಮಂಗಳವಾರ ರಾತ್ರಿ ಅರವಿಂದರಿಗೆ ಹೃದಯಾಘಾತವಾಗಿದ್ದು, ನಂತರ ಅವರು ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅರವಿಂದ ತ್ರಿವೇದಿ ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಕಾರಣದಿಂದ ಅವರು ಬಹಳ ಸಮಯ ಹಾಸಿಗೆಯ ಮೇಲೆ ಇರಬೇಕಾಗಿತ್ತು.
ರಾಮಾಯಣ’ ನಂತರ ಅರವಿಂದ ತ್ರಿವೇದಿ ಅನೇಕ ಸಿನಿಮಾ ಮತ್ತು ಧಾರವಾಹಿಗಳಲ್ಲಿ ಕೆಲಸ ಮಾಡಿದ್ದರು. ‘ವಿಕ್ರಮ್ ಮತ್ತು ಬೇತಾಳ್ ಹೊರತಾಗಿಯೂ ಹಲವು ಹಿಂದಿ ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿ ಅರವಿಂದ್ ಅವರ ಅದ್ಭುತ ಅಭಿನಯ ಕಂಡುಬಂದಿದೆ. ರಮಾನಂದ ಸಾಗರ್ ಅವರ ಅತ್ಯಂತ ಜನಪ್ರಿಯ ಪೌರಾಣಿಕ ಧಾರಾವಾಹಿ ‘ರಾಮಾಯಣ’ದಲ್ಲಿನ ಅವರ ರಾವಣನ ಪಾತ್ರವು ತ್ರಿವೇದಿ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ಇಂದಿಗೂ ಜನರು ಅದೇ ಪಾತ್ರದಿಂದ ಅವರನ್ನು ನೆನಪಿಸಿಕೊಳ್ಳುತ್ತಾರೆ. ಅವರು 300ಕ್ಕೂ ಹೆಚ್ಚು ಗುಜರಾತಿ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಇದರ ಹೊರತಾಗಿ ಅವರು ಅನೇಕ ಗುಜರಾತಿ ನಾಟಕಗಳಿಗೆ ಕೂಡ ಬಣ್ಣ ಹಚ್ಚಿದ್ದಾರೆ.

****