ಶ್ರೀ ಮತ್ತು ರಚನಾ ಜೋಡಿಯ ‘ಲೆಟ್ಸ್ ಬ್ರೇಕಪ್’ ಗೆ ಚಾಲನೆ
‘ಲವ್ ಮಾಕ್ಟೇಲ್’ ನಟಿ ರಚನಾ ಇಂದರ್ ಹಾಗೂ ‘ಇರುವುದೆಲ್ಲವ ಬಿಟ್ಟು’ ಸಿನಿಮಾದ ಶ್ರೀ ಮಹದೇವ್ ನಟನೆಯ ‘ಲೆಟ್ಸ್ ಬ್ರೇಕಪ್’ ಚಿತ್ರದ ಮುಹೂರ್ತ ಶ್ರೀ ಅಂಗಾಳ ಪರಮೇಶ್ವರಿ ಸನ್ನಿಧಿಯಲ್ಲಿ ನೆರವೇರಿತು. ಜನವರಿ ಒಂದರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಸ್ವರೂಪ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಸ್ವರೂಪ್ ಅವರದೆ, ಮಿರುನಾಲಿನಿ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಇದೊಂದು ರೊಮ್ಯಾಂಟಿಕ್ ಡ್ರಾಮಾವಾಗಿದ್ದು, ಶೂಟಿಂಗ್ ಇನ್ನಷ್ಟೇ ಆರಂಭವಾಗಬೇಕಿದೆ. ಚಿತ್ರದ ಬಗ್ಗೆ ಮಾತನಾಡಿದ ನಾಯಕಿ ರಚನಾ, ‘ಈ ಲವ್ ಸ್ಟೋರಿಯಲ್ಲಿ ನಾನು ಕಾಲೇಜ್ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಬಹಳ ಸೈಲೆಂಟ್ ಆಗಿರುವ ಈ ಕಾಲದ ಹುಡುಗಿ ಪಾತ್ರ. ಪಾತ್ರಕ್ಕೆ ಭಿನ್ನ ಶೇಡ್ ಗಳೇನಿಲ್ಲ. ನಾನು ಸ್ಟೋರಿ ಕೇಳಿ ಇಷ್ಟವಾಗಿ ಚಿತ್ರ ಒಪ್ಪಿಕೊಂಡೆ ಎಂದರು.
‘ಲೆಟ್ಸ್ ಬ್ರೇಕಪ್’ ಒಂದು ಇಂಟೆನ್ಸ್ ಲವ್ ಸ್ಟೋರಿ. ಇಡೀ ಚಿತ್ರ ಲವ್ ಟ್ರ್ಯಾಕ್ ಬಿಟ್ಟು ಬೇರೆ ಎಲ್ಲೂ ಹೋಗುವುದಿಲ್ಲ. ನನಗೆ ಸಿನಿಮಾದಲ್ಲಿ ಎರಡು ಶೇಡ್ ಇದೆ. ಪ್ರೀತಿಯ ತೀವ್ರತೆ ಮತ್ತು ಅದರಿಂದ ಯುವ ಜೋಡಿ ಹೊರಬರುವಾಗಿನ ಕಷ್ಟಗಳು ಎಲ್ಲವೂ ಹೇಗಿರುತ್ತವೆ ಎಂಬುದನ್ನು ನಿರ್ದೇಶಕ ಸ್ವರೂಪ್ ಬಹಳ ಚೆನ್ನಾಗಿ ಬರೆದಿದ್ದಾರೆ. ನನಗಂತೂ ಬಹಳ ಒಳ್ಳೆಯ ಪಾತ್ರ ಸಿಕ್ಕಿದೆ ಎನ್ನಬಹುದು. ಹಿಂದೆಯೇ ಶೂಟಿಂಗ್ ಶುರು ಆಗಬೇಕಿತ್ತು. ಆದರೆ ಈ ಚಿತ್ರಕ್ಕೋಸ್ಕರ ನಾನು ಬಾಡಿ ಬಿಲ್ಡ್ ಮಾಡಬೇಕಿದ್ದ ಕಾರಣ ಸ್ವಲ್ಪ ವಿಳಂಬವಾಯ್ತು ಎಂದು ಶ್ರೀ ಮಹದೇವ್ ಹೇಳಿದರು.
ಐದು ಹಾಡುಗಳಿರುವ ಈ ಚಿತ್ರಕ್ಕೆ ವಿನೀತ್ ರಾಜ್ ಮೆನನ್ ಸಂಗೀತ ನೀಡುತ್ತಿದ್ದಾರೆ. ಲವೀತ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ ಹಾಗೂ ಸತೀಶ್ ಅವರ ಕಲಾ ನಿರ್ದೇಶನ , ಅರ್ಜುನ್ ರಾಜ್ ಸಾಹಸ ನಿರ್ದೇಶನ ಹಾಗೂ ನಂದಕುಮಾರ್ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಇನ್ನು ಶ್ರೀ ಮಹಾದೇವ್ ಹೊಂದಿಸಿ ಬರೆಯಿರಿ ಮತ್ತು ಗಜಾನನ ಮತ್ತು ಗ್ಯಾಂಗ್ ಎಂಬ ಚಿತ್ರದಲ್ಲೂ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
****