News

ಹ್ಯಾಪಿ ಬರ್ತಡೇ ಗಾಳಿಪಟ ನೀತು

ಹ್ಯಾಪಿ ಬರ್ತಡೇ ಗಾಳಿಪಟ ನೀತು
  • PublishedSeptember 2, 2021

ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆಯ ನಟಿಯಾಗಿ ಮಿಂಚಿದ್ದ ನೀತು ಇಂದು ತಮ್ಮ 33ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದಿಗಂತ್ ಗೆ ಜೋಡಿಯಾಗಿ ನಟಿಸಿದ ಗಾಳಿಪಟ ಸಿನಿಮಾ ಬಂದು ಹತ್ತು ವರ್ಷಗಳೇ ಕಳೆದಿದ್ದರೂ ಇಂದಿಗೂ ಇವರು ಅಭಿಮಾನಿಗಳ ಪಾಲಿಗೆ ಗಾಳಿಪಟ ನೀತು ಆಗಿದ್ದಾರೆ.

ಸಿನಿಮಾ ಕ್ಷೇತ್ರಕ್ಕೆ ಬಂದು ಹದಿನೈದು ವರ್ಷಗಳನ್ನು ಪೂರೈಸಿರುವ ನೀತು ಕನ್ನಡ ಹಾಗೂ ಮಲಯಾಳಂ ಸೇರಿದಂತೆ ಸುಮಾರು ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ಪುಣ್ಯ ಧಾರವಾಹಿಯ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನೀತು, ನವರಸ ನಾಯಕ ಜಗ್ಗೇಶ್ ಹಾಗೂ ಕೋಮಲ್ ನಟಿಸಿದ ಚಿತ್ರದಲ್ಲಿ ಮೊದಲ ಬಾರಿಗೆ ಅವಕಾಶ ಪಡೆಯುತ್ತಾರೆ. ನಂತರ ಕೋಟಿ ಚೆನ್ನಯ, ಗಾಳಿಪಟ, ಪೂಜಾರಿ, ಕೃಷ್ಣ ನೀ ಲೇಟಾಗ್ ಬಾರೋ, ಜೋಕ್ ಫಾಲ್ಸ್ ಸೇರಿದಂತೆ ಸಾಲುಸಾಲು ಸಿನಿಮಾ ಮಾಡಿ ಸೈ ಎನಿಸಿಕೊಂಡ ಈ ನಟಿ ಸ್ಯಾಂಡಲ್ ವುಡ್ ನಲ್ಲಿ ಹೆಸರಾಗಿರೋದು ಗಾಳಿಪಟ ನೀತು ಅಂಥಾನೆ.

 ಮಂಗಳೂರಿನ ಮಗಳಾದ ನೀತು ಬಾಲ್ಯದಿಂದಲೂ ಅಮ್ಮನೊಂದಿಗೆ ಸದಾ ಸಾಹಿತ್ಯಲೋಕ ಹಾಗೂ ರಂಗಭೂಮಿಯೊಂದಿಗೂ ಒಡನಾಟ ಇಟ್ಟುಕೊಂಡು ಬೆಳೆದವರು. ಕರಾವಳಿಯ ಲೇಖಕಿಯರ ವಾಚಕಿಯರ ಸಂಘದಲ್ಲಿ ನೀತು ಅವರ ತಾಯಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿದ್ದರು. ಅಲ್ಲಿ ಸಾರಾ ಅಬೂಬಕರ್ ಅವರ ಪರಿಚಯ, ಸಾಹಿತ್ಯ ಪ್ರಭಾವ ಆಯಿತು. ಅಮ್ಮ ಕೂಡ ಬಾಲ್ಯದಲ್ಲೇ ಅನುಪಮಾ ನಿರಂಜನ ಅವರ ದಿನಕ್ಕೊಂದು ಕಥೆ ಪುಸ್ತಕವನ್ನು ಓದಿಸುವ ಮೂಲಕ ಮಗಳನ್ನ ಸಾಹಿತ್ಯದೆಡೆಗೆ ಹಚ್ಚಿದ್ದರು.  ಆ ವಾತಾವರಣದಲ್ಲಿ ಬೆಳೆದ ನೀತು ಇಂದು 1888 ಎಂಬ ಸಿನಿಮಾಗೆ ಹಾಡನ್ನು ಬರೆದು ಹೊಸ ಪ್ರಯತ್ನ ಮಾಡಿದ್ದಾರೆ.

ಒಂದು ಕಾಲದಲ್ಲಿ ಮಿಂಚಿ ನಂತರ ಸಿನಿಮಾ ಅವಕಾಶಗಳು ಇಲ್ಲದಿದ್ದಾಗ ಕುಗ್ಗುವ ನಟಿಯರಿಗೆ ನೀತು ಮಾದರಿ… ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಕೊರೊನಾದಿಂದ ಕರುನಾಡು ತತ್ತರಿಸುವಾಗ ಕವಿರಾಜ್ ಅವರು ಆರಂಭಿಸಿದ ಉಸಿರು ತಂಡದಲ್ಲಿ ಸದಸ್ಯರಾಗಿರುವ ನೀತು ಕೊರೊನಾ ಸಂತ್ರಸ್ತರಿಗೆ ಸಹಾಯ ಮಾಡುವಲ್ಲಿ ಸದಾಸಿದ್ದರು. ಕೊರೊನ ಪೀಡಿತರಿಗೆ ಆಂಬುಲೆನ್ಸ್ ವ್ಯವಸ್ಥೆ, ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ, ಫುಡ್ ಕಿಟ್ ವ್ಯವಸ್ಥೆ ಹಾಗೂ ಬುಡಕಟ್ಟು ಜನಾಂಗದವರ ಮನೆಗಳಿಗೆ ಟಾರ್ಪಲ್ ಹೊದಿಕೆ ಹಾಕುವ ಕೆಲಸಗಳಲ್ಲಿ ನೀತು ಶ್ರಮಿಸಿದ್ದಾರೆ.

ಹೀಗೆ ತನ್ನನ್ನು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳವ ಮೂಲಕ ಬಡ ಜನರ ಸೇವೆಗೆ ಮುಂದಾಗಿರುವ ಯುವ ಜನರಿಗೆ ಮಾದರಿಯಾಗುತ್ತಿರುವ ನೀತು ಅವರಿಗೆ ಕನ್ನಡ ಪಿಚ್ಚರ್ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತದೆ.

****

Written By
Kannadapichhar

Leave a Reply

Your email address will not be published. Required fields are marked *