ಅಣ್ಣಾವ್ರ ಮಗ ಎಂಬ ಒಂದೇ ಕಾರಣಕ್ಕೆ KFIಲ್ಲಿ 35 ವರ್ಷ ಉಳಿಯಲು ಸಾಧ್ಯವಾ..? Shivaraj kumar exclusive story

ಡಾ ಶಿವರಾಜಕುಮಾರ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಂದ ನೆಗೆಟಿವ್ ಮಾತನ್ನು ಗಮನಿಸಿ ಅದಕ್ಕೆ ಸಮಂಜಸ ಉತ್ತರ ಕೊಟ್ಟಿರೋ Santhosh Kumar LM ಅವರು ಒಂದು ಕಂಪನಿಯ ಸಾಫ್ಟ್ವೇರ್ ಉದ್ಯೋಗಿ ಹೀಗಿದ್ರು ಅವರಿಗೆ ಕನ್ನಡ ಸಾಹಿತ್ಯ ಮತ್ತು ಕನ್ನಡ ಚಿತ್ರರಂಗದ ಬಗ್ಗೆ ಅಪಾರ ಪ್ರೀತಿ.. ಕನ್ನಡ ಚಿತ್ರರಂಗದಲ್ಲಿ ಕರುನಾಡ ಚಕ್ರವರ್ತಿ ಎಂಬ ನಾಮಾಂಕಿತ ಹೊಂದಿರುವ ಶಿವಣ್ಣ ಅವರ ಬಗ್ಗೆ ತಮ್ಮ ಎಫ್ ಬಿಲಿ ಒಂದು ಪೋಸ್ಟನ್ನು ಕೂಡ ಮಾಡಿದ್ದಾರೆ.
60ರ ಆಸು ಪಾಸಿನಲ್ಲಿರುವ ಶಿವಣ್ಣನ ಎನರ್ಜಿಗೆ ಅವರ ಮುಂದಿರುವ ಸಾಲು ಸಾಲು ಸಿನಿಮಾಗಳೇ ಸಾಕ್ಷಿ. ಭಜರಂಗಿ 2 ಚಿತ್ರ ಬಿಡುಗಡೆ ಆಗುತ್ತಿರುವ ಹೊಸ್ತಿಲಲ್ಲಿ ಹೆಚ್ಚು ಸಹ್ಯವೆನ್ನಿಸಿರುವ Santhosh Kumar LM ಅವರ ಬರಹ ಕನ್ನಡ ಪಿಚ್ಚರ್ ಅಲ್ಲಿ ಮತ್ತೊಮ್ಮೆ ರೀ ಪೋಸ್ಟ್ ಆಗುತ್ತಿದೆ.
ಶಿವರಾಜ್‌ಕುಮಾರ್ ಅನ್ನುವ ನಟ ಕೇವಲ ರಾಜ್‌ಕುಮಾರ್ ಅನ್ನುವ ಮೇರುನಟನ ಮಗನೆಂಬ ಕಾರಣಕ್ಕೆ ಇಂದು ಚಿತ್ರರಂಗದಲ್ಲಿ ಉಳಿದುಕೊಂಡಿಲ್ಲ. ಹಿಟ್ ಸಿನಿಮಾಗಳ ಮಾತು ಪಕ್ಕಕ್ಕಿರಲಿ. ಒಂದು ಇಂಡಸ್ಟ್ರಿಯಲ್ಲಿ 35 ವರ್ಷ ಕೆಲಸ ಮಾಡಿಯೂ ಇನ್ನೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾರೆಂದರೆ ಅದಕ್ಕೆ ಕಾರಣ ಅವರ ಶ್ರಮ, ಪ್ರತಿಭೆಯೇ ಹೊರತು ಯಾರ ಹೆಸರೂ ಅಲ್ಲ.

ತಂದೆಯ ಹೆಸರು ಎನ್ನುವುದು ಯಾವುದೇ ಇಂಡಸ್ಟ್ರಿಗೆ ಎಂಟ್ರಿ ಪಡೆಯಲಷ್ಟೇ ಸಹಾಯಕವಾಗುತ್ತೆ. ಮುಂದುವರಿದಂತೆ ಆತನೇ ಬೆವರಿಳಿಸಿ ತನ್ನ ಮೌಲ್ಯವನ್ನು ಉಳಿಸಿಕೊಂಡು, ಪ್ರೂವ್ ಮಾಡುತ್ತ ತನ್ನನ್ನು ತಾನು ಉಳಿಸಿಕೊಳ್ಳುತ್ತ ಸಾಗಬೇಕು.
ಇವತ್ತಿಗೂ ಶಿವಣ್ಣನ ಸಿನಿಮಾಗಳು ಫ್ಲಾಪ್ ಆಗುತ್ತವೆ, ಜೊತೆಗೆ ಹಿಟ್ ಕೂಡ ಆಗುತ್ತವೆ. ಹಿಟ್ ಸಿನಿಮಾಗಳಿಗೆ ಬೇರೆಯವರ ಹೆಸರನ್ನು ಕಾರಣವಾಗಿಸಿ ಸೋಲುವ ಸಿನಿಮಾಗಳಿಗಷ್ಟೇ ಶಿವಣ್ಣನ ಹೆಸರನ್ನು ತಳುಕು ಹಾಕುವುದು ಸರಿಯಲ್ಲ. ಆದರೂ ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ತಮ್ಮ ಕೆಲಸವನ್ನು ಮಾಡುತ್ತ ಸಾಗುತ್ತಿರುವುದರಿಂದಲೇ ಇಂದು ಇಲ್ಲಿ ನೆಲೆಯೂರಲು ಸಾಧ್ಯವಾಗಿದೆ.

ಸಾಧಾರಣ ಒಂದು ಕಂಪನಿಯಲ್ಲಿ ಮೂರು ವರ್ಷಗಳಿಗಿಂತ ಹೆಚ್ಚು ನಮ್ಮನ್ನು ನಾವು ಉಳಿಸಿಕೊಳ್ಳಲು ಹರಸಾಹಸಪಡುತ್ತೇವೆ. ಹೊಸ ಪ್ರತಿಭೆಗಳು, ಹೊಸ ವ್ಯವಸ್ಥೆ ಬಂದಂತೆ ಅವುಗಳಿಗೆ ಒಗ್ಗಿಕೊಳ್ಳಲಾಗದೆ ಕಂಪನಿ ಬಿಡುತ್ತೇವೆ. ಅಂಥದ್ದರಲ್ಲಿ 35ವರ್ಷಗಳು ಒಂದು ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿರುವುದು ತಮಾಷೆಯ ವಿಷಯವೇ ಅಲ್ಲ. ಆದರೂ ಅವರ ಬಗ್ಗೆ ಇನ್ನೂ ಅಲ್ಲೊಂದು ಇಲ್ಲೊಂದು negative comment ನೋಡುವುದು ಬೇಸರದ ವಿಷಯ.
ಹತ್ತಿರತ್ತಿರ 60ವರ್ಷಗಳ ಆಸುಪಾಸಿನಲ್ಲಿ ಇದ್ದರೂ ಇನ್ನೂ ಯುವಕರಂತೆ ದೇಹವನ್ನು ಕಾಪಾಡಿಕೊಂಡಿರುವ, ಯುವಕರೂ ನಾಚುವಂತೆ ನರ್ತಿಸುವ ಶಿವರಾಜ್‌ಕುಮಾರ್ ಎಂಬ ನಟ ಯುವನಟರಿಗೆ ಮಾದರಿ. ಇಂದಿಗೂ ಆತ ಬೇಡಿಕೆಯ ನಟ. ನಿರ್ದೇಶಕರ ನಟ. ಮಾಸ್ ಆಗಲಿ, ಕ್ಲಾಸ್ ಆಗಲಿ, ಕಮರ್ಶಿಯಲ್ ಆಗಲಿ ಎಲ್ಲದ್ದಕ್ಕೂ ಹೊಂದಿಕೊಳ್ಳುವ ನಟ. ಹಳ್ಳಿ ಸಬ್ಜೆಕ್ಟ್ ಆದರೂ ಸೈ, ಸಿಟಿ ಸಬ್ಜೆಕ್ಟ್ ಆದರೂ ಸೈ. ನಿರ್ಮಾಪಕ ಧೈರ್ಯ ಮಾಡಿ ಬಂಡವಾಳವನ್ನು ಹೂಡಬಲ್ಲಂತಹ comfort ಕೊಡಬಲ್ಲ ನಟ. ಎಲ್ಲಕ್ಕಿಂತ ಹೆಚ್ಚಾಗಿ ಇಷ್ಟೆಲ್ಲ ಸಾಧಿಸಿದ್ದರೂ ತಗ್ಗಿ ನಡೆಯುವ ದೊಡ್ಡ ಗುಣ ಎಲ್ಲರೂ ಅವರಲ್ಲಿ ಇಷ್ಟಪಡುವುದು.
ಹಾಗಂತ ಅವರು ಟೀಕೆಗಳಿಗೆ ಹೊರತಲ್ಲ. ಅವರನ್ನು ಟೀಕಿಸೋಣ. ಅವರ ಸಿನಿಮಾಗಳನ್ನು ಒಂದೊಂದಾಗಿ ಒರೆಗೆ ಹಚ್ಚೋಣ. ಆದರೆ ಒಟ್ಟಾರೆ ಅವರ ಸಿನಿಮಾಪಯಣವನ್ನೇ ಏನೂ ಇಲ್ಲ ಅಂತ ಒಂದೆರಡು ವಾಕ್ಯಗಳಲ್ಲಿ ಮುಗಿಸಿಬಿಡುವುದಿದೆಯಲ್ಲ. ಅದು ಅವರಿಗೆ ಏನೂ ಮಾಡಲಾರದು. ನಮ್ಮ ಯೋಗ್ಯತೆಯನ್ನು ಹೇಳುತ್ತದೆ ಅಷ್ಟೇ.
(ಇಂದು ನೋಡಿದ ಅವರ ಬಗೆಗಿನ negative ಕಮೆಂಟ್ ಒಂದು ಈ ರೀತಿ ಬರೆಯಲು ಪ್ರೇರೇಪಿಸಿತು)
Santhosh Kumar LM
****