ಡಾ. ರಾಜ್ ಸಿನಿಮಾ ಹೆಸರುಗಳನ್ನು ಮರುಬಳಕೆ ಮಾಡದಂತೆ ಅಭಿಮಾನಿಗಳ ಆಗ್ರಹ

ಡಾ. ರಾಜ್ ಕನ್ನಡ ಚಿತ್ರ ಪ್ರೇಮಿಗಳ ಪಾಲಿಗೆ ಆರಾಧ್ಯ ದೈವ, ಅದರಲ್ಲೂ ಅಭಿಮಾನಿಗಳ ಪಾಲಿಗೆ ದೇವತಾ ಮನುಷ್ಯ. ಎಷ್ಟೋ ಜನರಿಗೆ ಡಾ.ರಾಜ್ ಎಂದರೆ ಸ್ಪೂರ್ತಿ. ಅವರ ಚಿತ್ರಗಳು ಅದೆಷ್ಟೋ ಜನರ ಬದುಕಿನ ದಿಕ್ಕನ್ನು ಬದಲಾಯಿಸಿದೆ ಎಂಬುದು ಕೂಡ ಅಷ್ಟೇ ಸತ್ಯ. ಅಣ್ಣಾವ್ರ ಸಿನಿಮಾಗಳನ್ನ ತುಂಬ ಪ್ರೀತಿಯಿಂದ ಮನೆ ಮಂದಿಯೆಲ್ಲಾ ಕುಳಿತು ನೋಡುತ್ತಾರೆ.

ಹಳೆ ಸಿನಿಮಾಗಳ ಟೈಟಲ್ ಅನ್ನು ಮರು ಬಳಕೆ ಮಾಡಿಕೊಂಡು ಹೊಸ ಸಿನಿಮಾ ಮಾಡುವುದು ಇತ್ತೀಚೆಗೆ ಒಂದು ಟ್ರೆಂಡ್ ಆಗಿತ್ತು. ಆದರೆ ಇನ್ನು ಮುಂದೆ ಡಾ.ರಾಜಕುಮಾರ್ ಅವರು ಅಭಿನಯಿಸಿರುವ ಸಿನಿಮಾದ ಟೈಟಲ್ ಅನ್ನು ಬಳಸಿಕೊಳ್ಳಲು ಅನುಮತಿ ನೀಡಬಾರದು ಎಂದು ರಾಜಕುಮಾರ್ ಅಭಿಮಾನಿಗಳ ಸಂಘವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿದೆ,ಇದಕ್ಕೆ ಮಂಡಳಿಯೂ ಸಕಾರಾತ್ಮಕವಾಗಿ ಸ್ಪಂದಿಸಿದೆ.

ಇತ್ತೀಚೆಗೆ ಡಾ.ರಾಜ್ ಕುಮಾರ್ ಅವರ ಸಿನಿಮಾ ಹೆಸರನ್ನು ಕೆಲವು ನಿರ್ಮಾಪಕರು ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಆದರೆ ಆ ಟೈಟಲ್ ಗೆ ತಕ್ಕನಾಗಿ ಸಿನಿಮಾಗಳು ಬರುತ್ತಿಲ್ಲಾ ಕೆಲವೊಮ್ಮ ಕಳಪೆಯಾಗಿರುತ್ತವೆ ಎಂಬುದು ರಾಜಕುಮಾರ್ ಅಭಿಮಾನಿಗಳ ಸಂಘದ ದೂರು. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಡಾ.ರಾಜ್ ಕುಮಾರ್ ಸಿನಿಮಾಗಳನ್ನು ಹುಡುಕಿದ್ರೆ ಹೊಸ ಸಿನಿಮಾಗಳು ಸಿಗುತ್ತವೆ. ಹೊಸ ಸಿನಿಮಾಗಳ ಪೋಸ್ಟರ್‌ಗಳು ಬರುತ್ತಿವೆ, ಇದಕ್ಕೆ ಕಡಿವಾಣ ಹಾಕಬೇಕೆಂದು ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಈ ವಿಚಾರವಾಗಿ ಇಂದು (ಅಗಸ್ಟ್ 30) ರಾಜ್ ಅಭಿಮಾನಿ ಸಂಘಟನೆ ಫಿಲ್ಮ್ ಚೇಂಬರ್‌ಗೆ ತೆರಳಿ ಮನವಿ ಸಲ್ಲಿಸಿದ್ದಾರೆ. ಮಂಡಳಿ ಇದಕ್ಕೆ ಕಡಿವಾಣ ಹಾಕದಿದ್ದರೆ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುದಾಗಿ ಸಂಘವು ಎಚ್ಚರಿಕೆ ನೀಡಿದೆ.
****