ಹೊಸತನದಲ್ಲಿ 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರೀ-ರಿಲೀಸ್ ಆಗುತ್ತಿದೆ ಅಣ್ಣಾವ್ರ ಭಾಗ್ಯವಂತರು ಸಿನಿಮಾ

ಡಾ ರಾಜ್ಕುಮಾರ್ ನಟನೆಯ ಸಾಕಷ್ಟು ಸಿನಿಮಾಗಳು ಸೂಪರ್ ಹಿಟ್ ಸಾಲಿನಲ್ಲಿವೆ. ಈ ಪೈಕಿ ಅನೇಕ ಸಿನಿಮಾಗಳನ್ನು ವಿನೂತನ ತಂತ್ರಜ್ಞಾನ ಬಳಸಿ ಹೊಸ ರೂಪದಲ್ಲಿ ರಿಲೀಸ್ ಮಾಡುವ ಪ್ರಯತ್ನ ನಡೆದಿದೆ. ಈಗ ರಾಜ್ಕುಮಾರ್ ನಟನೆಯ ‘ಭಾಗ್ಯವಂತರು’ ಸಿನಿಮಾ ನವೆಂಬರ್ನಲ್ಲಿ ರೀ-ರಿಲೀಸ್ ಆಗುತ್ತಿದೆ. ಡಿ.ಐ, 7.1 ಟ್ರ್ಯಾಕ್ ಸೇರಿದಂತೆ ಅನೇಕ ಹೊಸ ತಂತ್ರಜ್ಞಾನ ಅಳವಡಿಕೆಯೊಂದಿಗೆ ಸಿನಿಮಾ ಮರು ಬಿಡುಗಡೆಯಾಗುತ್ತಿದೆ. ಮುನಿರಾಜು ಈ ಚಿತ್ರವನ್ನು ಮತ್ತೆ ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ.
ಎಚ್.ಆರ್. ಭಾರ್ಗವ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ‘ಭಾಗ್ಯವಂತರು’ ಚಿತ್ರದಲ್ಲಿ ರಾಜ್ಕುಮಾರ್ ಹಾಗೂ ಬಿ.ಸರೋಜಾದೇವಿ ಅವರು ನಟಿಸಿದ್ದರು. ದ್ವಾರಕೀಶ್ ಈ ಚಿತ್ರದ ನಿರ್ಮಾಪಕರು. ಸಿನಿಮಾ ರೀ-ರೀಲಿಸ್ ಆಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಭಾರ್ಗವ್, ‘ನಾನು ಆಗಲೇ ರಾಜ್ಕುಮಾರ್ ಅವರು ನಟಿಸಿದ್ದ ಬಬ್ರುವಾಹನ, ನಾ ನಿನ್ನ ಮರೆಯಲಾರೆ, ಜಗ ಮೆಚ್ಚಿದ ಮಗ ಸೇರಿದಂತೆ ಅನೇಕ ಚಿತ್ರಗಳಿಗೆ ಸಹ ನಿರ್ದೇಶನ ಮಾಡಿದ್ದೆ. ಹಾಗಾಗಿ ರಾಜ್ ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿ . ನನಗೂ ಅವರೆಂದರೆ ಅಷ್ಟೇ ಪ್ರೀತಿ. ನಿರ್ಮಾಪಕ ದ್ವಾರಕೀಶ್ ಹಾಗೂ ರಾಜ್ಕುಮಾರ್ ಇಬ್ಬರೂ ನೀವೆ ಈ ಚಿತ್ರ ನಿರ್ದೇಶನ ಮಾಡಬೇಕು ಎಂದರು. ಆಗ ನಾನು ‘ಭಾಗ್ಯವಂತರು’ ಚಿತ್ರವನ್ನು ನಿರ್ದೇಶಿಸಿದೆ. ನನ್ನ ಮೊದಲ ನಿರ್ದೇಶನದ ಚಿತ್ರವೇ ಸೂಪರ್ ಹಿಟ್ ಆಯಿತು. ಈಗ ಮುನಿರಾಜು ನೂತನ ತಂತ್ರಜ್ಞಾನ ಅಳವಡಿಕೆಯೊಂದಿಗೆ ಈ ಚಿತ್ರವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ ಅವರಿಗೆ ಒಳ್ಳೆಯದಾಗಲಿ’ ಎಂದರು ಹಿರಿಯ ನಿರ್ದೇಶಕ ಭಾರ್ಗವ.
****