‘ಪುನೀತ್’ ಹೆಸರಿನಲ್ಲಿ ಸರ್ಕಲ್ ಗೆ ನಾಮಕರಣ ಮಾಡಿದ ಗ್ರಾಮಸ್ಥರು ಮತ್ತು ಕೂಲಿ ಕಾರ್ಮಿಕರು

ಬೆಂಗಳೂರಿನ ಮಹದೇವಪುರ ಕ್ಷೇತ್ರದ ಯರಪ್ಪನಹಳ್ಳಿ ಮತ್ತು ರಾಮನಗರದ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಅಂಬಾಡಹಳ್ಳಿಯಲ್ಲಿ ಪುನೀತ್ ರಾಜಕುಮಾರ್ ಹೆಸರಿನಲ್ಲಿ ವೃತ್ತಗಳಿಗೆ ನಾಮಕರಣ ಮಾಡಿ ಅಪ್ಪು ಮೇಲಿನ ಪ್ರೀತಿ, ಅಭಿಮಾನವನ್ನು ಮೆರೆದಿದ್ದಾರೆ.
ಯರಪ್ಪನಹಳ್ಳಿಯಲ್ಲಿ ಅಪ್ಪು ಸರ್ಕಲ್ ಉದ್ಘಾಟನೆ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಗಲಿ ಇಂದಿಗೆ ಒಂದು ತಿಂಗಳು ಕಳೆದರೂ ಅವರ ನೆನೆಪು ಮಾತ್ರ ಇನ್ನೂ ಮಾಸಿಲ್ಲ. ಪ್ರತಿದಿನ ಪುನೀತ್ ಹೆಸರಲ್ಲಿ ಅಭಿಮಾನಿಗಳು ಏನಾದರೂ ಒಂದು ಸೇವಾ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಅದೇ ರೀತಿಯಲ್ಲಿ ಇಂದು ಮಹದೇವಪುರ ಕ್ಷೇತ್ರದ ಯರಪ್ಪನಹಳ್ಳಿ ಗ್ರಾಮದಲ್ಲಿ ‘ಅಪ್ಪು ಸರ್ಕಲ್’ ಉದ್ಘಾಟನೆ ಮಾಡಲಾಯಿತು.
ಯರಪ್ಪನಹಳ್ಳಿ ಗ್ರಾಮದಲ್ಲಿ ಪುನೀತ್ ಅವರ ನೆನಪಿಗಾಗಿ ಗ್ರಾಮದ ವೃತ್ತಕ್ಕೆ ‘ಅಪ್ಪು ಸರ್ಕಲ್’ ಎಂದು ನಾಮಕರಣ ಮಾಡಿ ಇಂದು ಉದ್ಘಾಟನೆ ಮಾಡಿದ್ದಾರೆ. ಇಂದು ಊರಿನ ಎಲ್ಲ ಜನರು ಸೇರಿ ಹಬ್ಬದ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದ್ದು, ಈ ವೇಳೆ ಅಪ್ಪು ಸರ್ಕಲ್ ಎಂದು ನಾಮಫಲಕವನ್ನು ಅಳವಡಿಸಿ ಮಕ್ಕಳ ಮತ್ತು ಊರಿನ ಹಿರಿಯರ ಕೈಯಲ್ಲಿ ಉದ್ಘಾಟನೆ ಮಾಡಿಸಿದರು. ಗ್ರಾಮದ ಎಲ್ಲ ಹಿರಿಯರಿಗೆ ಸನ್ಮಾನ ಮಾಡುವ ಮೂಲಕ ಗೌರವ ಸಲ್ಲಿಸಿದರು.
ಪುನೀತ್ ಅಭಿಮಾನಿ ಮುನಿರಾಜ್ ಈ ಕುರಿತು ಮಾತನಾಡಿ, ಇಂದು ನಮ್ಮ ಗ್ರಾಮದ ಎಲ್ಲರೂ ತೀರ್ಮಾನ ಮಾಡಿ ಕನ್ನಡ ರಾಜ್ಯೋತ್ಸವ ಮಾಡುವ ಮೂಲಕ ಬಂಡೆ ಬೊಮ್ಮಸಂದ್ರದಿಂದ ಯರಪ್ಪನಹಳ್ಳಿ ಕಾಲೋನಿಗೆ ಹೋಗುವ ವೃತ್ತಕ್ಕೆ ‘ಅಪ್ಪು ಸರ್ಕಲ್’ ಎಂದು ನಾಮಕರಣ ಮಾಡಿ ಉದ್ಘಾಟನೆ ಮಾಡಲಾಗಿದೆ. ಪ್ರತಿವರ್ಷ ಪುನೀತ್ ಅವರ ಪುಣ್ಯಸ್ಮರಣೆ ಆಚರಣೆ ಮಾಡಲಾಗುವುದು ಎಂದರು.

ಕಳೆದ ಒಂದು ತಿಂಗಳಿಂದ ನಮ್ಮ ಕರ್ನಾಟಕದ ಜನ ದುಃಖದಿಂದ ಇದ್ದಾರೆ. ಯಾವುದೇ ಕಾರ್ಯಕ್ರಮವನ್ನು ಸಂತೋಷದಿಂದ ಆಚರಣೆ ಮಾಡುತ್ತಿಲ್ಲ. ಇವರ ಸ್ಮರಣಾರ್ಥವಾಗಿ ಈ ಸರ್ಕಲ್ ನಿರ್ಮಾಣ ಮಾಡಿದ್ದು, ಈ ವೃತ್ತವನ್ನು ಇನ್ನೂ ಮುಂದೆ ಅಪ್ಪು ಸರ್ಕಲ್ ಎಂದೇ ಕರೆಯಲಾಗುತ್ತದೆ. ಮುಂದಿನ ವರ್ಷ ಅದ್ದೂರಿಯಾಗಿ ಪುಣ್ಯ ಸ್ಮರಣೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆನಂದ್, ನರಸಿಂಹಪ್ಪ, ರಾಮಚಂದ್ರ, ಗಣೇಶ್, ವೈ.ವಿ.ಕುಮಾರ್ ಲೋಕೇಶ್, ವೆಂಕಟೇಶ್, ಕುಮಾರ್ ಯರಪ್ಪನಹಳ್ಳಿ ಮತ್ತಿತರು ಇದ್ದರು.
ಅಂಬಾಡಿಹಳ್ಳಿಯ ವೃತ್ತಕ್ಕೆ ಪುನೀತ್ ಹೆಸರು:
ರಾಮನಗರ ಅಂಬಾಡಹಳ್ಳಿ ಗ್ರಾಮದ ವೃತ್ತಕ್ಕೆ ಪುನೀತ್ ಹೆಸರಿಟ್ಟು ಪುನೀತ್ ನೆನಪನ್ನು ಚಿರಸ್ಥಾಯಿಯನ್ನಾಗಿಸಿದ್ದಾರೆ.ಅಂಬಾಡಹಳ್ಳಿ , ಬಡ ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಕುಗ್ರಾಮ. ಆದರೆ ಅಲ್ಲಿನ ಜನತೆಯ ಅಭಿಮಾನದಲ್ಲಿ ಮಾತ್ರ ಇನ್ನಿಲ್ಲದ ಶ್ರೀಮಂತಿಕೆ. ಅದು ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಂಡಿತು. ನೆಚ್ಚಿನ ನಟ ಹೆಸರನ್ನು ವೃತ್ತಕ್ಕೆ ಇಡುವ ಮೂಲಕ ಹೃದಯ ಶ್ರೀಮಂತಿಕೆ ಮೇರದಿದ್ದಾರೆ ಅಂಬಾಡಳ್ಳಿ ಗ್ರಾಮಸ್ಥರು. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗಡಿ ಗ್ರಾಮದ ಅಂಬಾಡಹಳ್ಳಿಯಲ್ಲಿ ಪುನೀತ್ ಅಭಿಮಾನಿ ಬಳಗ ಮತ್ತು ಗ್ರಾಮಸ್ಥರು ಪುನೀತ್ ಸ್ಮರಣೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿದ್ದರು. ಹೊರಗಿನಿಂದ ಸಂಪನ್ಮೂಲ ಕ್ರೂಡೀಕರಿಸದೆ, ತಮ್ಮದೇ ಸ್ವಂತ ಹಣ ಬಳಸಿ ಚಿಕ್ಕದಾಗಿ ಆದರೆ ಚೊಕ್ಕವಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು.
ಅಂಬಾಡಹಳ್ಳಿ ಗ್ರಾಮದ ಹೊರ ಬಾಗಿಲನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಆರಂಭದಲ್ಲಿ ಬೆಳ್ಳಿ ರಥದಲ್ಲಿ ಅಗಲಿದ ನಟ ಪುನೀತರಾಜಕುಮಾರ್ ಭಾವಚಿತ್ರವನ್ನಿಟ್ಟು, ಡೊಳ್ಳುಕುಣಿದೊಂದಿಗೆ ಗ್ರಾಮದ ಬೀದಿಬೀದಿಗಳಲ್ಲಿ ಮೆರವಣಿಗೆ ನಡೆಸಿದ್ರು. ಇದಕ್ಕೆ ಆಟೋ ಚಾಲಕರು ಸಾಥ್ ನೀಡಿದರು
ನಂತರ ಗ್ರಾಮದ ವೃತಕ್ಕೆ ಪುನೀತ್ ರಾಜಕುಮಾರ್ ವೃತ್ತವೆಂದು ನಾಮಕರಣ ಮಾಡಿ, ನಾಮಫಲಕ ಅಳವಡಿಸಿ, ಕನ್ನಡ ಧ್ವಜರೋಹಣ ಮಾಡಿ, ರಾಜ್ಯೋತ್ಸವ ಆಚರಿಸಿ, ಪುನೀತ್ ಸವಿನೆನೆಪಿಗಾಗಿ ಸಾವಿರಾರು ಮಂದಿಗೆ ಅನ್ನ ಸಂತರ್ಪಣೆ ಮಾಡಿ ಜನ ಮೆಚ್ಚುಗೆಗೆ ಪಾತ್ರರಾದರು.

****