ಮತ್ತೆ ಮುನ್ನಲೆಗೆ ಬರುತ್ತಿದೆ ಡಬ್ಬಿಂಗ್ ಇಶ್ಯು..!
ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸದ್ದು ಮಾಡಿದ್ದ ಡಬ್ಬಿಂಗ್ ಇಶ್ಯೂ ಈಗ ಮತ್ತೆ ಚರ್ಚೆ ಶುರುವಾದಂತೆ ಕಾಣ್ತಿದೆ. ಡಬ್ಬಿಂಗ್ ಇರಲಿ ಎಂದು ಕೆಲವರು, ಬೇಡ ಎಂದು ಹಲವರು, ಡಬ್ಬಿಂಗ್ ಪರ ಮತ್ತು ವಿರುದ್ದದ ದ್ವನಿಗಳು ಮತ್ತೊಮ್ಮೆ ಕೇಳಿ ಬರುತ್ತಿದೆ.
ಡಬ್ಬಿಂಗ್ ಸಿನಿಮಾಗಳನ್ನು ಡಾ.ರಾಜ್ಕುಮಾರ್ ಅವರು ಕೂಡ ವಿರೋಧಿಸಿದ್ದರು . ಆದರೆ ಕಾಲ ಕಳೆದಂತೆ ಡಬ್ಬಿಂಗ್ ಸಿನಿಮಾಗಳ ಹಾವಳಿ ಹೆಚ್ಚಾಗಿದೆ. ಯಾವ ಮಟ್ಟಕ್ಕೆ ಅಂದರೆ, ಪ್ರತಿ ವಾರ ಬಿಡುಗಡೆಯಾಗುತ್ತಿರುವ ಬೇರೆ ಭಾಷೆಗಳ ಚಿತ್ರಗಳು, ಕನ್ನಡದಲ್ಲಿಯೂ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಇದರಿಂದ ಇಲ್ಲಿನ ಸಿನಿಮಾಗಳಿಗೆ ಹೊಡೆತ ಬೀಳುತ್ತಿದೆ. ಡಬ್ಬಿಂಗ್ ವಿರೋಧಿಸಲು ಪ್ರಮುಖ ಕಾರಣಗಳು ಇವೆ. ಕನ್ನಡ ನಾಡಿನ ಭಾಷೆ, ಸಂಸ್ಕೃತಿ ಉಳಿಸುವಲ್ಲಿ ಸಿನಿಮಾರಂಗದ ಕೊಡುಗೆ ಕೂಡ ಇರುತ್ತದೆ. ಹಾಗಾಗಿ ಕನ್ನಡ ನೆಲದಲ್ಲಿ ಪರಭಾಷಿಗರ ಹಾವಳಿ ತಡೆಯಲು ಡಬ್ಬಿಂಗ್ ಗೆ ವಿರೋಧ ಮಾಡಲಾಗುತ್ತಿತ್ತು.
ಕನ್ನಡ ಚಿತ್ರರಂದ ಕಲಾವಿದರು, ತಂತ್ರಜ್ಞರು ಮತ್ತು ಕನ್ನಡ ಪರ ಸಂಘಟನೆಗಳು ಸೇರಿ ರಾಜ್ಯದಲ್ಲಿ ಹೋರಾಟವನ್ನು ರೂಪಿಸಿದ್ದರು. ನಂತರ ಡಬ್ಬಿಂಗ್ ವಿಷಯ ನ್ಯಾಯಾಲಯದ ಅಂಗಳಕ್ಕೆ ಬಂದು ನಿಂತಿತ್ತು, ನ್ಯಾಯಾಲವೂ ಕೂಡ ಡಬ್ಬಿಂಗ್ ಇದ್ದರೆ ಸಮಸ್ಯೆ ಏನಿಲ್ಲಾ ಎಂಬ ಅಭಿಪ್ರಾಯಕ್ಕೆ ಬಂದಿತು.
ಇದೊಂದು ಭಾವನಾತ್ಮಕ ಜೊತೆಗೆ ವ್ಯಾವಹಾರಿಕ ವಿಚಾರವೂ ಹೌದು. ಸಿನಿಮಾ ಇಂಡಸ್ಟ್ರಿ ಎಂಬುದು ದೊಡ್ಡ ಉದ್ಯಮವಾಗಿ ಬೃಹದಾಕಾರವಾಗಿ ಬೆಳೆದು ಹಣದ ವಹಿವಾಟು ಕೂಡ ಮೊದಲಿಗಿಂತಲೂ ಜೋರಾಗೆ ನಡೀತಿದೆ. ದಿನಗಳೆದಂತೆ ಎಲ್ಲವೂ ಬದಲಾಗಿ ಹೋಗಿದೆ. ಡಬ್ಬಿಂಗ್ ಸಿನಿಮಾಗಳ ಹಾವಳಿಯೇ ಹೆಚ್ಚಾಗುವ ಲಕ್ಷಣಗಳು ಕಾಣುತ್ತಿದೆ. ದೊಡ್ಡ ದೊಡ್ಡ ಸಿನಿಮಾಗಳು ಕನ್ನಡದಲ್ಲಿ ಡಬ್ ಆಗಿ ಬಿಡುಗಡೆಗೆ ಸಜ್ಜಾಗಿ ನಿಂತಿವೆ. ಇದರಿಂದ ಕನ್ನಡ ಸಿನಿಮಾಗಳು ಹೇಗೆ ಪಾರಾಗಬೇಕು ಎಂದು ಹೊಸಬರ ತಂಡಗಳು ತಲೆಕಡೆಸಿಕೊಂಡಿವೆ. ಸಾಕಷ್ಟು ಸ್ಟಾರ್ ನಟ ನಟಿಯರೂ ಕೂಡ ಡಬ್ಬಿಂಗ್ ವಿರೋಧಿಸುತ್ತಲೇ ಬಂದಿದ್ದಾರೆ. ಈಗ ಎಲ್ಲೆಡೆ ಈ ಪ್ಯಾನ್ ಇಂಡಿಯಾ ಎನ್ನುವ ವಿಚಾರ ಮುನ್ನೆಲೆಗೆ ಬಂದಿದೆ. ಒಂದೇ ಸಿನಿಮಾವನ್ನು ಹಲವು ಭಾಷೆಗಳಿಗೆ ಡಬ್ ಮಾಡಿ ಸಿನಿಮಾ ರಿಲೀಸ್ ಮಾಡುವುದು ಕೂಡ ಈಗ ಸರಳವಾಗಿದೆ. ಹೀಗಾಗಿ ಎಲ್ಲರು ಇದೇ ದಾರಿಯಲ್ಲಿ ಸಿನಿಮಾ ಮಾಡಲು ಮುಂದಾಗುತ್ತಿದ್ದಾರೆ.

ಇನ್ನು ಭಾರತ ಬಹುನಿರೀಕ್ಷೆಯ ಸಿನಿಮಾಗಳಾದ RRR, ಅಲ್ಲು ಅರ್ಜುನ್ ಅಭಿನಯದ ಪುಷ್ಪ(Puspa), ರಣ್ವೀರ್ ಸಿಂಗ್ ಅವರ 83 ಚಿತ್ರಗಳು ಸದ್ಯ ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗುತ್ತಿವೆ. ಈ ಚಿತ್ರಗಳು ಮೂಲ ಭಾಷೆಯ ಜೊತೆಗೆ ಕನ್ನಡದಲ್ಲೂ ಕರ್ನಾಟಕದಲ್ಲಿ ತೆರೆ ಕಾಣುತ್ತವೆ. ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡಗಳು ತಯಾರಿ ನಡೆಸಿಕೊಂಡಿವೆ. ಹೀಗಾಗಿ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರು ಕಡಿಮೆ ಆಗಬಹುದು ಎನ್ನುವ ಆತಂಕ ಮನೆ ಮಾಡಿದೆ. ಆದರೆ ಇತ್ತೀಚೆಗೆ ಕನ್ನಡದ ಚಿತ್ರಗಳು ಕೂಡ ಪರಭಾಷೆಗೆ ಡಬ್ ಆಗಿ ರಿಲೀಸ್ ಆಗುತ್ತಿವೆ. ಆದರೂ ಕೂಡ ಕನ್ನಡ ಚಿತ್ರಗಳಿಗೆ ಪರಭಾಷೆಯ ಹೊಡೆತ ಬೀಳಲಿದೆ ಎನ್ನುವುದು ಸದ್ಯದ ತಲೆ ನೋವಿನ ವಿಚಾರ.

ಮೊದಲೇ ಸ್ಯಾಂಡಲ್ ವುಡ್ನಲ್ಲಿ ಹೊಸಬರ ಸಿನಿಮಾಗಳು ಅಷ್ಟಾಗಿ ಯಶಸ್ಸುಗಳಿಸಲ್ಲ. ಈ ಎಲ್ಲ ಸವಾಲುಗಳ ನಡುವೆ ಇದೀಗ ಡಬ್ಬಿಂಗ್ ಭೂತದ ಕಾಟ ಕೂಡ ಹೆಚ್ಚಾಗಿದೆ. ಇದರಿಂದ ಅನೇಕ ಹೊಸಬರ ತಂಡ ಸಿನಿಮಾ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಕಷ್ಟ ಪಟ್ಟು ಸಿನಿಮಾ ಮಾಡಿದ್ದ ಅದೆಷ್ಟೋ ನಿರ್ಮಾಪಕರು ತಲೆ ಮೇಲೆ ಕೈ ಇಟ್ಟು ಕೂತಿದ್ದಾರೆ.

ಕೆಲವು ಸಿನಿಮಾಗಳು ಸ್ಟಾರ್ ಕಾಸ್ಟ್ ಮೇಲೆ ನಿಲ್ಲದೆ. ಚಿತ್ರದ ಕಥೆಯ ಮೇಲೆ ನಿಂತಿರುತ್ತವೆ. ಒಂದಷ್ಟು ವಿಚಾರಗಳನ್ನು ಸಮಾಜಕ್ಕೆ ಸಾರಲು ಸದಭಿರುಚಿ ಚಿತ್ರಗಳು ನಿರ್ಮಾಣ ಆಗುತ್ತವೆ. ಇಂತಹ ಸಿನಿಮಾಗಳು ನಿಧಾನವಾಗಿ ಸಿನಿಪ್ರೇಕ್ಷಕರನ್ನು ತಲುಪುತ್ತವೆ. ಆದರೆ ಸಾಲು ಸಾಲಾಗಿ ಕನ್ನಡದ ಕಮರ್ಷಿಯಲ್ ಚಿತ್ರಗಳ ಜೊತೆಗೆ ಪರಭಾಷೆಯ ಹಾವಳಿ ಶುರುವಾದರೆ ಈ ಚಿತ್ರಗಳಿಗೆ ನೆಲೆ ಸಿಗುವುದು ಕಷ್ಟ. ಹೀಗಾಗಿ ಏನು ಮಾಡಬೇಕೆಂದು ತಿಳಿಯದೆ ಹೊಸಬರು ಕಂಗಾಲಾಗಿದ್ದಾರೆ.
****