ಪಿಚ್ಚರ್ UPDATE

ಅಪ್ಪು ಅಭಿನಯದ 6 ಸೂಪರ್ ಹಿಟ್‌ ಸಿನಿಮಾಗಳು ವೂಟ್‌ ಸೆಲೆಕ್ಟ್‌ ಮತ್ತು ಕಲರ್ಸ್‌ ಕನ್ನಡದಲ್ಲಿ..!

ಅಪ್ಪು ಅಭಿನಯದ 6 ಸೂಪರ್ ಹಿಟ್‌ ಸಿನಿಮಾಗಳು ವೂಟ್‌ ಸೆಲೆಕ್ಟ್‌ ಮತ್ತು ಕಲರ್ಸ್‌ ಕನ್ನಡದಲ್ಲಿ..!
  • PublishedOctober 28, 2022

ಕನ್ನಡಿಗರ ಕಣ್ಮಣಿ ಪುನೀತ್‌ ರಾಜ್‌ಕುಮಾರ್‍‌ ನಮ್ಮನ್ನಗಲಿ ಅಕ್ಟೋಬರ್ 29ಕ್ಕೆ ಒಂದು ವರ್ಷವಾಗುತ್ತೆ.. ಇದೇ ಸಂದರ್ಭದಲ್ಲಿ ವೂಟ್‌ ಸೆಲೆಕ್ಟ್‌ ಮತ್ತು ಕಲರ್ಸ್ ಕನ್ನಡ ಜಂಟಿಯಾಗಿ ಅಪ್ಪು‌ ಅವರಿಗೆ ಅವರ ಸಿನಿಮಾಗಳ ಮೂಲಕವೇ ಸಿನಿನಮನ ಸಲ್ಲಿಸಲು ಮುಂದಾಗಿದೆ. ನಾಯಕನಟನಾಗಿ ಪುನೀತ್‌ ರಾಜ್‌ಕುಮಾರ್ ವೃತ್ತಿಜೀವನದ ಪ್ರಾರಂಭ ಕಾಲದ 6 ಸೂಪರ್ ಹಿಟ್‌ ಸಿನಿಮಾಗಳನ್ನು, ಪ್ರಸಾರ ಮಾಡುವುದರ ಮೂಲಕ ಅಭಿಮಾನಿಗಳ ಮನಸಲ್ಲಿ ಜೀವಂತವಾಗಿರುವ ಅವರ ನೆನಪುಗಳನ್ನು ಇನ್ನಷ್ಟು ಉಜ್ವಲಗೊಳಿಸುವ ಪ್ರಯತ್ನವನ್ನು ವೂಟ್‌ ಸೆಲೆಕ್ಟ್ ಮತ್ತು ಕಲರ್ಸ್ ಕನ್ನಡ ವಾಹಿನಿ ಮಾಡುತ್ತಿದೆ.

‘ಅಪ್ಪು’, ʻಅಭಿ’, ‘ನಮ್ಮಬಸವ’, ʻಆಕಾಶ್’, ‘ಮೌರ್ಯ’,’ಅಜಯ್’ – ಇವು ‘ಅಪ್ಪು ಸಿನಿನಮನ’ದಲ್ಲಿ ಪ್ರಸಾರ ಆಗುತ್ತಿರೋ ಚಿತ್ರಗಳಾಗಿವೆ… ಅ.29ರಿಂದ ನ.19ರವರೆಗೆ. ‘ಅಪ್ಪು ಸಿನಿ ನಮನ’ದ ಅಂಗವಾಗಿ ಅಕ್ಟೋಬರ್ 28ರಂದು ‘ವೂಟ್‌ ಸೆಲೆಕ್ಟ್‌’ ವೇದಿಕೆಯಲ್ಲಿ ಪುನೀತ್‌ ರಾಜ್‌ಕುಮಾರ್ ಅಭಿನಯದ 6 ಸಿನಿಮಾಗಳು ಒಟ್ಟಿಗೆ ಬಿಡುಗಡೆಯಾಗಲಿವೆ. ‘ಪವರ್‌ ಸ್ಟಾರ್’ ಅಭಿನಯದ ಆರು ಸೂಪರ್‌ ಹಿಟ್‌ ಸಿನಿಮಾಗಳನ್ನು ಆಸ್ವಾದಿಸುವ ಅವಕಾಶವನ್ನು ವೂಟ್‌ ತನ್ನ ವೀಕ್ಷಕರಿಗೆ ಒದಗಿಸಿಕೊಡಲಿದೆ. ಈ ಮೂಲಕ ವರನಟ ರಾಜ್‌ಕುಮಾರ್‌ ಕುಟುಂಬದ ಕಿರಿಮಗನಾಗಿ ಜನಿಸಿ, ಕನ್ನಡಿಗರ ಹೃದಯದಲ್ಲಿ ಹಿರಿದಾಗಿ ಬೆಳೆದ ‘ಅಪ್ಪು’ ನೆನಪನ್ನು ಇನ್ನಷ್ಟು ಜೀವಂತಗೊಳಿಸುತ್ತಿದೆ.

ಇನ್ನೊಂದೆಡೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಕ್ಟೋಬರ್ 27ರಿಂದ 29ರವರೆಗೆ ಪ್ರತಿದಿನ ಮಧ್ಯಾಹ್ನ 2 ಗಂಟೆಗೆ ‘ಆಕಾಶ್‌’, ‘ಮೌರ್‍ಯ’ ಮತ್ತು ‘ಅಪ್ಪು’ ಸಿನಿಮಾಗಳು ಪ್ರಸಾರವಾಗಲಿವೆ. ನಂತರ ಪ್ರತಿ ಶುಕ್ರವಾರ ಅಂದರೆ, ನ. 5, ನ. 19 ಮತ್ತು ನ. 19ರಂದು ಮಧ್ಯಾಹ್ನ 2 ಗಂಟೆಗೆ ‘ಅಜಯ್’, ‘ನಮ್ಮ ಬಸವ’ ಮತ್ತು ‘ಅಭಿ’ ಸಿನಿಮಾಗಳು ಪ್ರಸಾರವಾಗಲಿವೆ.

ಈ ಕುರಿತು ಕಲರ್ಸ್ ಕನ್ನಡ ಕ್ಲಸ್ಟರ್ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಮಾತನಾಡಿ, ‘ಪುನೀತ್ ರಾಜ್ಕುಮಾರ್ ಒಳ್ಳೆಯ ನಟ ಅಷ್ಟೇ ಅಲ್ಲ, ನಿಷ್ಕಲ್ಮಶ ನಗು ಇರುವ ಅಪ್ಪಟ ಕನ್ನಡದ ವ್ಯಕ್ತಿ. ಅವರು ಅನೇಕ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಅವರ ಜೊತೆಗೆ ‘ಕನ್ನಡದ ಕೋಟ್ಯಧಿಪತಿ’, ‘ಫ್ಯಾಮಿಲಿ ಪವರ್’ ಶೋಗಳನ್ನು ಮಾಡುವಾಗ ಆ ಮೌಲ್ಯಗಳನ್ನು ನೋಡುವ ಅವಕಾಶ ನನಗೆ ಸಿಕ್ಕಿತ್ತು. ನಮ್ಮ ಸಂಸ್ಥೆ ‘ಕಲರ್ಸ್ ಕನ್ನಡ’ದ ಜೊತೆಗೂ ಅವರಿಗೆ ಬಹಳ ಒಳ್ಳೆಯ ಸಂಬಂಧವಿತ್ತು. ಈಗ ನಾಯಕನಟನಾಗಿ ಅವರ ವೃತ್ತಿಬದುಕಿನ ಪ್ರಾರಂಭದ ಕಾಲದ 6 ಸಿನಿಮಾಗಳನ್ನು, ನಮ್ಮ ವಾಹಿನಿಯಲ್ಲಿ ನಾವು ಪ್ರಸಾರ ಮಾಡುತ್ತಿದ್ದೇವೆ. ಈ ಸಿನಿಮಾಗಳನ್ನು ನೋಡುತ್ತ ಅವರು ಬದುಕಿದ್ದ ಮೌಲ್ಯಗಳನ್ನು ಜನರು ನೆನಪಿಸಿಕೊಳ್ಳಲು ಸಾಧ್ಯವಾದರೆ, ಅವುಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾದರೆ ಅದು ದೊಡ್ಡ ಗೆಲುವು ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದರು.

Written By
Kannadapichhar