News

ಬಡವ ರಾಸ್ಕೆಲ್ ಟ್ರೈಲರ್ ರಿಲೀಸ್ ಡೇಟ್ ಮುಂದೂಡಿದ ಡಾಲಿ..!

ಬಡವ ರಾಸ್ಕೆಲ್ ಟ್ರೈಲರ್ ರಿಲೀಸ್ ಡೇಟ್ ಮುಂದೂಡಿದ ಡಾಲಿ..!
  • PublishedDecember 8, 2021

ಡಾಲಿ ಧನಂಜಯ್ ಅಭಿನಯದ ‘ಬಡವ ರಾಸ್ಕಲ್’ ಚಿತ್ರದ ಟ್ರೇಲರ್ ಡಿಸೆಂಬರ್ 9 ರಂದು ಮಧ್ಯಾಹ್ನ 12:20ಕ್ಕೆ ಬಿಡುಗಡೆಯಾಗಲಿದೆ ಎಂದು ಕ್ಯಾಪ್ಷನ್ ಬರೆದು ಪೋಸ್ಟರ್‌ವೊಂದನ್ನು ಶೇರ್ ಮಾಡಿಕೊಂಡಿದ್ದರು ಧನಂಜಯ್. ಆದರೆ ತಾಂತ್ರಿಕ ಕಾರಣಗಳಿಂದಾಗಿ ನಾಳೆ (ಡಿ.9) ಟ್ರೇಲರ್ ರಿಲೀಸ್ ಆಗುತ್ತಿಲ್ಲಾ, ಬದಲಿಗೆ ಡಿಸೆಂಬರ್ 13 ರಂದು ಟ್ರೇಲರ್  ಬಿಡುಗಡೆ ಮಾಡಲು ಉದ್ದೇಶಿಸಿರುವುದಾಗಿ ಡಾಲಿ ಧನಂಜಯ್ ತಿಳಿಸಿದ್ದಾರೆ. ಡಿಸೆಂಬರ್ 9ಕ್ಕೆ ರಿಲೀಸ್ ಆಗಬೇಕಿದ್ದ “ಬಡವ ರಾಸ್ಕಲ್” ಸಿನಿಮಾದ Trailer ಡಿಸೆಂಬರ್ 13 ಕ್ಕೆ ರಿಲೀಸ್ ಆಗಲಿದೆ… ಎಂದು ಫೇಸ್ ಬುಕ್ ವೀಡಿಯೋವೊಂದನ್ನು ಶೇರ್ ಮಾಡಿದ್ದಾರೆ ಧನಂಜಯ್.

ಡಾಲಿ ಧನಂಜಯ್  ಅಭಿನಯದ  ‘ಬಡವ ರಾಸ್ಕಲ್’ ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರತಂಡ ಪ್ರಚಾರ ಕಾರ್ಯಗಳನ್ನು ಭರ್ಜರಿಯಾಗಿ ನಡೆಸುತ್ತಿದೆ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಧನಂಜಯ್ ಅವರ ‘ಬಡವ ರಾಸ್ಕಲ್‌’ ಚಿತ್ರವು ಇದೇ ಡಿಸೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಇದರ ಪ್ರಚಾರಕ್ಕಾಗಿ ಚಿತ್ರತಂಡವು ಜನಸಾಮಾನ್ಯರನ್ನೇ ಬಳಸಿಕೊಂಡು ವಿಭಿನ್ನವಾಗಿ ಹೆಜ್ಜೆ ಇಟ್ಟಿದೆ. ಇದೀಗ ಚಿತ್ರತಂಡ ಚಿತ್ರ ಬಿಡುಗಡೆಗೂ ಮುನ್ನ ಟ್ರೇಲರ್ ಬಿಡುಗಡೆ ಮಾಡುವುದಾಗಿ ಮಾಹಿತಿಯನ್ನು ಹಂಚಿಕೊಂಡಿದೆ.

ಇತ್ತೀಚೆಗೆ ‘ಬಡವ ರಾಸ್ಕಲ್’ ಚಿತ್ರಕ್ಕೆ ಹೊಸ ರೀತಿಯಲ್ಲಿ ಅಭಿಮಾನಿಗಳು ಪ್ರೋತ್ಸಾಹ ನೀಡಿ ಸ್ವಯಂಪ್ರೇರಿತರಾಗಿ ಚಿತ್ರದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ಬಗ್ಗೆಯೂ ಧನಂಜಯ್ ಇನ್‌ಸ್ಟಾಗ್ರಾಮ್‌ನಲ್ಲಿ ಹಲವಾರು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

ಶಾಲಾ ಮಕ್ಕಳಿಂದ ಹಿಡಿದು ತರಕಾರಿ ಅಂಗಡಿ, ಮಾಂಸದ ಅಂಗಡಿ, ದಿನಸಿ ಅಂಗಡಿ, ಆಸ್ಪತ್ರೆ ರಶೀದಿ ಚೀಟಿ, ಎಳನೀರು ಗಾಡಿ, ಕಾರು ಗ್ಯಾರೇಜ್, ಬಿರಿಯಾನಿ ಹೋಟೆಲ್‌, ಆಟೋ ಚಾಲಕರವರೆಗೂ ಸೇರಿದಂತೆ ಹೀಗೆ ಎಲ್ಲೆಂದರಲ್ಲಿ ಇದೀಗ ‘ಬಡವ ರಾಸ್ಕಲ್‌’ ಪ್ರೊಮೋಷನ್ಸ್‌ ನಡೆಯುತ್ತಿದೆ. ‘ಡಿ.24ಕ್ಕೆ ಬಡವ ರಾಸ್ಕಲ್‌’ ಎನ್ನುವ ಸ್ಲೇಟ್‌ ಫಲಕ ಎಲ್ಲೆಡೆ ರಾರಾಜಿಸುತ್ತಿದೆ. ಈ ಹಿಂದೆ ಚಿತ್ರತಂಡ ಚಿತ್ರದ ಗ್ಲಿಂಪ್ಸ್ ವಿಡಿಯೋವನ್ನು ಬಿಡುಗಡೆ ಮಾಡಿತ್ತು. ವಿಡಿಯೋದಲ್ಲಿ ಧನಂಜಯ್, ಶಂಕರ್ ಅಲಿಯಾಸ್ ಬಡವ ರಾಸ್ಕಲ್… ಎಂದು ಮಾಸ್ ಎಂಟ್ರಿ ಕೊಟ್ಟಿದ್ದು, ಜೊತೆಯಲ್ಲಿ ಪಿಟ್ಟ, ಪ್ಯಾಕೆಟ್, ಕಬಾಬ್, ಬೆಂಕಿ,  ಸಣ್ಣಪ್ಪ, ಡೌನ್ ಟು ಅರ್ಥ್, ನಾಗ ಎಂಬ ಪಾತ್ರಗಳ ಪರಿಚಯವಿತ್ತು. 

ಈಗಾಗಲೇ ಚಿತ್ರದ ‘ಉಡುಪಿ ಹೋಟೆಲು’ ಹಾಗೂ ಲವ್‌ ಬ್ರೇಕಪ್ ಸಾಂಗ್ ಬಿಡುಗಡೆಯಾಗಿ ಸಂಗೀತ ಪ್ರಿಯರ ಮನಸನ್ನು ಗೆದ್ದಿದ್ದು, ಎರಡು ಹಾಡಿಗೂ ಧನಂಜಯ್ ಅವರೇ ಸಾಹಿತ್ಯ ರಚಿಸಿದ್ದಾರೆ. ಮಧ್ಯಮ ವರ್ಗದ ಜನರ ದಿನನಿತ್ಯದ ಜೀವನದಲ್ಲಿ ನಡೆಯುವ ಘಟನೆಗಳ ಸುತ್ತ ನಡೆಯುವ ಈ ಚಿತ್ರದಲ್ಲಿ ಧನಂಜಯ್‌ ಆಟೋ ಡ್ರೈವರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಡಾಲಿ ಪಿಕ್ಚರ್’ ಬ್ಯಾನರ್‌ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಂಕರ್‌ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ ಅವರಿಗೆ ನಾಯಕಿಯಾಗಿ ಅಮೃತ ಅಯ್ಯಂಗಾರ್‌ ಅಭಿನಯಿಸುತ್ತಿದ್ದಾರೆ. 

ವಿಶೇಷವಾಗಿ ಈ ಚಿತ್ರದಲ್ಲಿ ‘ಮಠ’ ಗುರುಪ್ರಸಾದ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಕತೆಗೆ ತಿರುವು ಕೊಡುವ ಪಾತ್ರ ಇದಾಗಿದ್ದು, ಚಿತ್ರದಲ್ಲಿನ ಅವರ ಗೆಟಪ್‌ ಈ ಹಿಂದೆ ರಿವೀಲ್ ಆಗಿತ್ತು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ವಾಸುಕಿ ವೈಭವ್‌ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಇನ್ನು ‘ಬಡವ ರಾಸ್ಕಲ್’ ಚಿತ್ರಕ್ಕೆ ಪ್ರೀತ ಜಯರಾಮನ್‌ ಛಾಯಾಗ್ರಹಣ, ನಿರಂಜನ್‌ ದೇವರಮನೆ ಸಂಕಲನ ಹಾಗೂ ವಿನೋದ್‌ ಸಾಹಸ ನಿರ್ದೇಶನವಿದೆ. ಇನ್ನು ಧನಂಜಯ್ ಕೈಯಲ್ಲಿ ಸಾಲು ಸಾಲು ಚಿತ್ರಗಳಿದ್ದು, ಮಾನ್ಸೂನ್ ರಾಗ ಹೆಡ್​ ಬುಷ್ ಹಾಗೂ  ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. 

Written By
Kannadapichhar

Leave a Reply

Your email address will not be published. Required fields are marked *