News

ದೊಡ್ಮನೆಗೆ ಅಭಿಮಾನಿಗಳೇ ದೇವ್ರು, ಕಾಡೇ ಗುಡಿ..!

ದೊಡ್ಮನೆಗೆ ಅಭಿಮಾನಿಗಳೇ ದೇವ್ರು, ಕಾಡೇ ಗುಡಿ..!
  • PublishedDecember 6, 2021

ಸ್ಯಾಂಡಲ್‌ವುಡ್‌ನ ದೊಡ್ಮನೆಗೂ ಕಾಡಿಗೂ ಅವನಾಭಾವ ಸಂಬಂಧ. ಈಗಲೂ ದಟ್ಟಾರಣ್ಯದ ನಡುವೇ ಇರೋ ಅಣ್ಣಾವ್ರ ಹುಟ್ಟೂರು ಸಿಂಗನಲ್ಲೂರು, ಬರೀ ಡಾ.ರಾಜ್‌ಕುಮಾರ್‌ಗೆ ಮಾತ್ರವಲ್ಲ ಅವ್ರ ಮಕ್ಕಳಿಗೂ ಅಚ್ಚುಮೆಚ್ಚು. ಅದ್ರಲ್ಲೂ ಪುನೀತ್‌ ರಾಜ್‌ಕುಮಾರ್‌ಗೆ ಸಿಂಗಾನಲ್ಲೂರು ಅಂದ್ರೆ ಸ್ಪೆಷಲ್‌ ಪ್ರೀತಿ. ಡಾ.ರಾಜ್‌ ಕುಮಾರ್‌ ನಿತ್ಯ ಪೂಜಿಸುವ ಮನೆ ದೇವ್ರು ಮುತ್ತತ್ತಿ ಆಂಜನೇಯನಿರುವುದು, ಅಲ್ಲೇ ದಟ್ಟಡವಿಯಲ್ಲೇ. ಚಾಮರಾಜನಗರ, ಕೊಳ್ಳೆಗಾಲ ಪ್ರದೇಶದ ಯಾರೇ ಸಿಕ್ಕರೂ ಅಣ್ಣಾವ್ರು ಕರೀತಾ ಇದ್ದಿದ್ದು ಹಾಗೆ, ಓಹ್‌ ನಮ್‌ ಕಾಡಿನವರು ಅಂತ. ಕಾಡನ್ನೇ ಇಷ್ಟ ಪಡ್ತಾ ಇದ್ದ ಅಣ್ಣಾವ್ರಿಗೆ ಕೊನೆಗಾಲದಲ್ಲಿ ವೀರಪ್ಪನ ಅಪಹರಣದಿಂದಾಗಿ ಕಾಡಿನಲ್ಲೇ ವನವಾಸ ಮಾಡಬೇಕಾಗಿಯೂ ಬಂದಿತ್ತು.

ಕನ್ನಡದಲ್ಲಿ ಸಾಕಷ್ಟು ಅರಣ್ಯ ಹಾಗೂ ವನ್ಯ ಸಂಪತ್ತಿನ ಕುರಿತಾದ ಸಿನಿಮಾಗಳು ಬಂದಿವೆ, ಆ ಪೈಕಿ ವರನಟ ಡಾ.ರಾಜ್‌ಕುಮಾರ್‌ ಅಭಿನಯಿಸಿದ್ದ 1973ರಲ್ಲಿ ತೆರೆಕಂಡ ಗಂಧದಗುಡಿ ಸಿನಿಮಾ ಕನ್ನಡಿಗರಿಗೆ ಮೊದಲು ನೆನಪಾಗುತ್ತೆ. ಇದೇ ಟೈಟಲ್‌ನಲ್ಲಿ, ಈ ಸಿನಿಮಾದ ಸೀಕ್ವೆಲ್‌ ಗಂಧದಗುಡಿ ಭಾಗ-2, 1994ರಲ್ಲಿ ತೆರೆಕಂಡಿತ್ತು. ಈ ಸಿನಿಮಾದಲ್ಲಿ ಅಣ್ಣಾವ್ರ ಹಿರಿಮಗ ಶಿವರಾಜ್‌ಕುಮಾರ್‌ ನಟಿಸಿದ್ರು, ಈ ಸಿನಿಮಾಕ್ಕೂ ಅಭಿಮಾನಿಗಳಿಂದ ದೊಡ್ಡ ಮಟ್ಟದ ಮೆಚ್ಚುಗೆ ಸಿಕ್ಕಿತ್ತು. ಈಗ ಇದೇ ಗಂಧದಗುಡಿಯ ಪ್ರದಕ್ಷಿಣೆ ಹಾಕಿ ಬಂದಿದ್ದಾರೆ ನಮ್ಮೆಲ್ಲರ ಪ್ರೀತಿಯ ಅಪ್ಪು.

ಅಣ್ಣಾವ್ರು ಹಾಗೂ ಶಿವಣ್ಣ ನಟಿಸಿದ್ದ ಎರಡೂ ಸಿನಿಮಾದಲ್ಲೂ, ಸಿನಿಮಾದ ಕಥೆಯ ನಿರೂಪಣೆಗಾಗಿ ಗಂಧದಗುಡಿಯ ಉದಗಲಕ್ಕೂ ಚಿತ್ರೀಕರಣ ನಡೆಸಲಾಗಿತ್ತು. ಈಗ ಅಪ್ಪು ಅವ್ರ ಕನಸಿನ ಡಾಕ್ಯುಮೆಂಟರಿಗಾಗಿ, ನೈಜ ಕಾಡಿನಲ್ಲಿ ಸ್ವತಃ ಅಪ್ಪು ಅವ್ರೇ ಅಲೆದಾಡಿ ನಿರ್ದೇಶಕ ಅಮೋಘವರ್ಷ ಜೊತೆಗೂಡಿ, ಕಾಡಿನ ಮೂಲೆ ಮೂಲೆಗೂ ಅಲೆದಾಡಿ ಚಿತ್ರೀಕರಣ ಮಾಡಿದ್ದಾರೆ. ಕಾಡಿನಲ್ಲಿ ಅಲೆದಾಡಲು, ಚಿತ್ರೀಕರಿಸಲು ದೊಡ್ಮನೆಯ ತಾರೆಗಳಿಗೆ ಕಾವಲಾಗಿದ್ದ ಮಾಸ್ತಮ್ಮ, ಅಪ್ಪ ಹಾಗೂ ಅಣ್ಣನ ಗಂಧದಗುಡಿಯನ್ನ ನೋಡುವ ಭಾಗ್ಯ ನೀಡಿ, ಅಪ್ಪು ಅವ್ರು ತಾವೇ ಚಿತ್ರೀಕರಿಸಿದ ಡಾಕ್ಯುಮೆಂಟರಿ ನೋಡಿ ಆನಂದಿಸುವ ಸೌಭಾಗ್ಯ ಕೊಡಲಿಲ್ಲ.

****

Written By
Kannadapichhar

Leave a Reply

Your email address will not be published. Required fields are marked *