News

ಅಣ್ಣಾವ್ರನ್ನ’ನಿನ್ನಂಥೋರ್ ಯಾರೂ ಇಲ್ವಲ್ಲೋ..’ಎಂದ ‘ಡೇರ್ಡೆವಿಲ್ ಮುಸ್ತಾಫಾ’ ತಂಡ

ಅಣ್ಣಾವ್ರನ್ನ’ನಿನ್ನಂಥೋರ್ ಯಾರೂ ಇಲ್ವಲ್ಲೋ..’ಎಂದ ‘ಡೇರ್ಡೆವಿಲ್ ಮುಸ್ತಾಫಾ’ ತಂಡ
  • PublishedOctober 9, 2021

ಕೆ. ಪಿ ಪೂರ್ಣಚಂದ್ರ ತೇಜಸ್ವಿಯವರ ಕತೆ ಆಧಾರಿತ ‘ಡೇರ್ಡೆವಿಲ್ ಮುಸ್ತಾಫಾ’ ಇದೇ ಮೊದಲ ಬಾರಿಗೆ ಕತೆಗಾರನ ಓದುಗರೇ ನಿರ್ಮಿಸುತ್ತಿರುವ ಸಿನಿಮಾ.

‘ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ’ ಎಂಬ ಈ ಗೀತೆ ಕನ್ನಡ ಹವ್ಯಾಸಿ ರಂಗಭೂಮಿಯ ಅತ್ಯಂತ ಪ್ರಸಿದ್ಧ ಗೀತೆ. ಸುಮಾರು 40 ವರ್ಷಗಳ ಹಿಂದೆ ಬೆಂಗಳೂರು ಸಮುದಾಯ ರಂಗತಂಡ ಅಭಿನಯಿಸಿದ ಪ್ರಸನ್ನ ನಿರ್ದೇಶಿಸಿದ, ಡಾ ಕೆ.ವಿ.ನಾರಾಯಣ ರಚಿಸಿದ ‘ಹುತ್ತವ ಬಡಿದರೆ’ ನಾಟಕಕ್ಕಾಗಿ ಡಾ.ಸಿ ವೀರಣ್ಣ ರಚಿಸಿದ ಈ ಹಾಡಿನ ಸಂಗೀತ ಸಂಯೋಜನೆ ಮಾಡಿದವರು ಶ್ರೀ ಬಿ.ವಿ.ಕಾರಂತ. ಈ ಪ್ರಸಿದ್ಧ ರಂಗಗೀತೆಯನ್ನು ‘ಡೇರ್ಡೆವಿಲ್ ಮುಸ್ತಾಫಾ’ ಚಿತ್ರದಲ್ಲಿ ಕಾಲೇಜು ಹುಡುಗರು ವಾರ್ಷಿಕೋತ್ಸವದಲ್ಲಿ ಹಾಡಿ ಕುಣಿಯುವಂತೆ ಚಿತ್ರಿಸಲಾಗಿದೆ.

ಈ ಹಾಡೊಳಗೆ ಮೈಸೂರು ರಾಜ ರಣಧೀರ ಕಂಠೀರವರ ಸಾಹಸದ ಕತೆಯಿದೆ. ಸಿನಿಮಾ ಹೊರತಾಗಿ ಈ ಹಾಡನ್ನು ವೈಭವದಿಂದ ಕಟ್ಟಿಕೊಡಬೇಕು ಎಂದೆನಿಸಿದಾಗ ಹೊಳೆದದ್ದು ಡಾ ರಾಜಕುಮಾರ್ ಅನಿಮೇಷನ್. ಇದೇ ಮೊದಲ ಬಾರಿಗೆ ಅಣ್ಣಾವ್ರನ್ನು ಅನಿಮೇಷನ್ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ. ಇದಕ್ಕೆ ಸುಮಾರು 800 ಕಲಾಭಿಮಾನಿಗಳು ನಮ್ಮ ಟೀಶರ್ಟ್ ಕೊಂಡು ಈ ಮಹತ್ವಾಕಾಂಕ್ಷಿ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ.ಈ ಹಾಡಿನ ಮೂಲಕ ಅಣ್ಣಾವ್ರಿಗೆ ದೃಶ್ಯ ನಮನ ಸಲ್ಲಿಸಿದೆ ಮತ್ತು ಈ ದಸರೆಯ ಸಂದರ್ಭದಲ್ಲಿ ಈ ಹಾಡಿನ ಬಿಡುಗಡೆ ಅತ್ಯಂತ ಉಚಿತವಾಗಿ ಇದೆ ಎಂದು ನಾವಾದರೂ ಭಾವಿಸಿದ್ದೇವೆ ಎಂದು ಚಿತ್ರ ತಂಡ ಈ ಹಾಡನ್ನು ಕಟ್ಟಿಕೊಟ್ಟ ಬಗ್ಗೆ ವಿವರಣೆ ನೀಡಿದೆ.

ಈ ಹಾಡಿಗೆ ವಾಸುಕಿ ವೈಭವ್ ದ್ವನಿ ನೀಡಿದ್ದು ಅರುಣ್ ಸಾಗರ್ ಕೂಡ ಸಾಥ್ ನೀಡಿದ್ದಾರೆ. ಸಾಹಿತ್ಯವನ್ನ ಡಾ ಸಿ.ವೀರಣ್ಣ ರಚಿಸಿದ್ದರೆ, ನವನೀತ್ ಶಾಮ್ ಸಂಗೀತ ಒದಗಿಸಿದ್ದಾರೆ.

ಸಿನಿಮಾದಲ್ಲಿ ಹಿರಿಯ ನಟರಾದ ಮಂಡ್ಯ ರಮೇಶ್, ಎಂಎಸ್ ಉಮೇಶ್, ಸುಂದರ್ ವೀಣ ಜೊತೆಗೆ ನಾಗಭೂಷಣ್, ಮೈಸೂರು ಪೂರ್ಣ, ಮೈಸೂರು ಆನಂದ್, ಆದಿತ್ಯ ಅಶ್ರೀ, ಸುಪ್ರೀತ್ ಭಾರಧ್ವಜ್, ಆಶಿತ್, ಶ್ರೀವತ್ಸ, ಪ್ರೇರಣ, ಹರಿಣಿ, ವಿಜಯ್ ಶೋಭರಾಜ್, ಚೈತ್ರಾ ಶೆಟ್ಟಿ, ಕಾರ್ತಿಕ್ ಪತ್ತಾರ್, ಕೃಷ್ಣೇಗೌಡ, ಮಹದೇವ ಇನ್ನೂ ಹಲವರು ನಟಿಸಿದ್ದಾರೆ.

ಶಶಾಂಕ್ ಸೋಗಲ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾವನ್ನು ಸಿನಿಮಾಮರ ತಂಡವು ನಿರ್ಮಾಣ ಮಾಡುತ್ತಿದೆ. ‘ಡೇರ್‌ಡೆವಿಲ್ ಮುಸ್ತಾಫಾ’ವು ತೇಜಸ್ವಿ ಅವರ ಸಣ್ಣ ಕತೆಯಾಗಿದ್ದು, ಅದನ್ನು ತುಸು ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಸಿನಿಮಾ ಮಾಡುತ್ತಿದೆ ಈ ಯುವ, ಉತ್ಸಾಹಿ ಬಳಗ.

****

Written By
Kannadapichhar

Leave a Reply

Your email address will not be published. Required fields are marked *