‘ನಿನ್ನ ಸನಿಹಕೆ’ ಯುವ ಪೀಳಿಗೆಯ ಪ್ರೀತಿಯ ಹೊಸ ವ್ಯಾಖ್ಯಾನ..! ಸಿನಿಮಾ ರಿವ್ಯೂ..!

ಅಮೃತಾ(ಧನ್ಯಾ) ಮತ್ತು ಆದಿ (ಸೂರಜ್) ನಡುವೆ ಮೊದಲ ನೋಟದಲ್ಲೆ ಸ್ನೇಹವಾಗುತ್ತದೆ ಆ ಸ್ನೇಹ ಗಾಢವಾಗಿ ಬೆಳೆದು ಪ್ರೀತಿಗೆ ಟರ್ನ್ ಆಗಲು ಹೆಚ್ಚು ಸಮಯವೇನು ಬೇಕಾಗುವುದಿಲ್ಲಾ. ಆದರೆ ಅದನ್ನು ಮೀರಿ ಮುಂದುವರೆಯಲು ಇಬ್ಬರಿಗೂ ಅವರದೇ ಆದ ಬದುಕಿನ ಹ್ಯಾಂಭಿಶನ್ಸ್ ಅಡ್ಡ ಬರುತ್ತವೆ. ನಾಯಕನಿಗೆ ತನ್ನ ತಾಯಿಯ ಆಸೆಯಂತೆ ಊರ ಗೌಡನ ಹತ್ತಿರ ಅಡವಿಟ್ಟ ಮನೆಯನ್ನು ಬಿಡಿಸಿ ಕೊಡಬೇಕೆಂಬ ಗುರಿ ಹೊಂದಿದ್ದರೆ ನಾಯಕಿ ಅಮೃತಾಗೆ ತನ್ನ ಅಂಗವಿಕಲೆ ಅಕ್ಕಾಳ ಬದುಕು ಸರಿಯಾಗಬೇಕೆಂಬ ಬಯಕೆ ಅಲ್ಲಿಯವರೆಗೂ ನಾಯಕ ನಾಯಕಿ ಮದುವೆ ಆಗಲು ಸಾಧ್ಯವಿಲ್ಲ ಎಂಬ ನಿರ್ಧಾರ.
ಕಾರಣಾಂತರಗಳಿಂದ ನಾಯಕ ತಾನಿದ್ದ ಮನೆಯಿಂದ ಹೊರ ಬರಬೇಕಾಗುತ್ತದೆ ಆಗ ನಾಯಕಿ ಅಮೃತಾ ಅವನಿಗೆ ಕೆಲವು ಷರತ್ತುಗಳ ಆಧಾರದ ಮೇಲೆ ತನ್ನ ಮನೆಯಲ್ಲಿ ಉಳಿಯಲು ಅವಕಾಶ ಮಾಡಿಕೊಡುತ್ತಾಳೆ..ಮುಂದೆ ಇವರಿಬ್ಬರ ನಡುವೆ ಬದುಕು ಹೇಗೆ ನಡೆಯುತ್ತದೆ ಇಬ್ಬರ ಪ್ರೀತಿ ಪ್ರೇಮ, ನೋವು ನಲಿವು, ಹೊಂದಾಣಿಕೆ ಪರಸ್ಪರ ನಂಬಿಕೆ, ಅಪನಂಬಿಕೆಗಳು ಎದುರಾಗುವ ಸಮಸ್ಯೆಗಳನ್ನು ಹೇಗೆ ನಿಭಾಯಿಸಿಕೊಳ್ಳುತ್ತಾರೆ ಎಂಬುದೇ ಸಿನಿಮಾದ ತಿರುಳು. ಚಿತ್ರದಲ್ಲಿ ತಾಯಿ ಮಗನ ಸೆಂಟಿಮೆಂಟು ಇದೆ ತಂದೆ ಮಗಳ ಪ್ರೀತಿ ವಾತ್ಸಲ್ಯವು ಇದೆ.
ಲಿವ್-ಇನ್-ರಿಲೇಷನ್ ಶಿಪ್ ಎಂದು ಕರೆಯಲ್ಪಡುವ, ಇತ್ತೀಚೆಗೆ ಮಹಾನಗರಗಳಲ್ಲಿ, ಸ್ವತಂತ್ರವಾಗಿ ಬದುಕುತ್ತೇನೆ ಎನ್ನುವ ಆಲೋಚನೆ ಇರುವ ಯುವಕ ಯುವತಿರು ಇಂತಹ ಲಿವ್ ಇನ್ ರಿಲೇಷನ್ ಶಿಪ್ ನಂತಹ ಸಂಬಂಧಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಅಂತಹ ಒಂದು ಎಳೆಯೊಂದನ್ನಿಟ್ಟುಕೊಂಡು ಕಥೆ ಹೇಳಲು ಹೊರಟಿದ್ದಾರೆ ಸೂರಜ್. ಸೂರಜ್ ಅವರ ನಿರ್ದೇಶನ ಚೆನ್ನಾಗಿದೆಯಾದರೂ ಇನ್ನಷ್ಟು ಹೋಮ್ ವರ್ಕ್ ಬೇಕಿತ್ತು ಎನ್ನಿಸುತ್ತದೆ. ಲಿವ್-ಇನ್-ರಿಲೇಷನ್ ಶಿಪ್ ನಂತಹ ಸಂಕಿರ್ಣ ವಿಷಯ ವಸ್ತುವನ್ನ ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿರುವ ಸೂರಜ್ ಗೌಡ ಅವರ ಪ್ರಯತ್ನಕ್ಕೆ ಶಬ್ಬಾಷ್ ಹೇಳಲೇಬೇಕು ಅದರೆ ಕಥೆಗೆ ಮತ್ತಷ್ಟು ಗಂಭೀರತೆ ಒದಗಿಸಬಹುದಾದ ಅಂಶಗಳ ಕಡೆ ಇನ್ನಷ್ಟು ಗಮನ ಹರಿಸಬೇಕಿತ್ತು ಎನ್ನಿಸುತ್ತದೆ.
ಇನ್ನು ಆಕ್ಟಿಂಗ್ ವಿಷಯಕ್ಕೆ ಬಂದರೆ ಸೂರಜ್ ಮತ್ತು ಧನ್ಯಾ ಅವರ ಕೆಮಿಸ್ಟ್ರಿ ಚಿತ್ರಕ್ಕೆ ಚೆನ್ನಾಗಿ ಹೊಂದಿಕೆಯಾಗಿದೆ ಡಿಂಪಿ ಮತ್ತು ಸೂರಜ್ ಗೆ ಫುಲ್ ಮಾರ್ಕ್ಸ್, ಸೂರಜ್ ಮಾಸ್ ಲುಕ್ ಮತ್ತು ಕ್ಲಾಸ್ ಎರಡು ಇದೆ. ಧನ್ಯ ರಾಮ್ ಕುಮಾರ್ ಕೂಡ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ ತುಂಬಾ ಆತ್ಮ ವಿಶ್ವಾಸದಿಂದ ನಟಿಸಿದ್ದಾರೆ. ಇನ್ನು ಪೋಷಕ ಪಾತ್ರದಲ್ಲಿ ನಟಿಸಿರೋ ಮಂಜುನಾಥ್ ಹೆಗ್ಡೆ, ಚಿತ್ಕಲಾ ಬಿರಾದಾರ್ ಹಾಗೂ ಆದಿತ್ಯನ ತಾಯಿಯ ಪಾತ್ರದಲ್ಲಿ ಅರುಣಾ ಬಾಲರಾಜ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ರಘು ಧೀಕ್ಷಿತ್ ಅವರ ಸಂಗೀತ ನಿನ್ನ ಸನಿಹಕೆ ಚಿತ್ರದ ದೊಡ್ಡ ಹೈಲೈಟ್, ಹಾಡುಗಳು ಸಿನಿಮಾ ಅಂದವನ್ನು ಹೆಚ್ಚಿಸಲು ರಘು ಧೀಕ್ಷಿತ್ ಅವರ ಪಾತ್ರ ದೊಡ್ಡದಿದೆ ಈಗಾಲೇ ಸಾಂಗ್ಸ್ ಫುಲ್ ಹಿಟ್ ಆಗಿರುವುದೇ ಸಾಕ್ಷಿ ಮಳೆ ಮಳೆ ಮಳೆಯೇ ಹಾಡು ಸಿನಿಮಾ ಮಂದಿರದಿಂದ ಹೊರ ಬಂದ ಮೇಲು ನಮಗೆ ಗೊತ್ತಿಲ್ಲದೆ ಗುನುಗುವಂತೆ ಮಾಡುತ್ತದೆ ಎಂದರೆ ಅದು ಆ ಸಂಗೀತಕ್ಕಿರುವ ಶಕ್ತಿ. ಕೊರೊನಾ ದಿಂದ ಮಂಕು ಕವಿದಿದ್ದ ವ್ಯವಸ್ತೆಯೊಳಗೆ ನಮಗೆಲ್ಲಾ ಕೊಂಚ ಮನರಂಜನೆ ಅವಶ್ಯಕವಾಗಿದೆ ಹಾಗಾಗಿ ಅಂತಹದೊಂದು ಚೇಂಜ್ ನಿಮಗೆ ಬೇಕೆಂದಿದ್ದರೆ ಥಿಯೇಟರ್ನಲ್ಲಿ ಕುಳಿತು ಒಂದೊಳ್ಳೆ ಸಿನಿಮಾ ನೋಡಿ, ಸ್ವಲ್ಪ ಅತ್ತು, ಹೆಚ್ಚು ನಕ್ಕು, ಖುಷಿಯಿಂದ ಹೊರಬರಬೇಕು ಅಂದುಕೊಂಡವರು ನಿನ್ನ ಸನಿಹಕೆ ಸಿನಿಮಾ ಮಿಸ್ ಮಾಡದೇ ನೋಡಿ.

****