ಮೇಘನಾರಾಜ್ 2ನೇ ಮದುವೆ ಬಗ್ಗೆ ಸುಳ್ಳುಸುದ್ದಿ ಹರಡಿದ ಯೂಟ್ಯೂಬ್ ಚಾನೆಲ್ ವಿರುದ್ದ ‘ಪ್ರಥಮ್’ ಆಕ್ರೋಶ

ಎರಡನೇ ಮದುವೆ ಬಗ್ಗೆ ಮೇಘನಾ ಎಲ್ಲಿಯೂ ಮಾತನಾಡಿಲ್ಲ. ಆದರೆ ಅವರು ಹೇಳಿಕೊಂಡಿದ್ದಾರೆ ಎಂಬ ರೀತಿಯಲ್ಲಿ ಕೆಲವು ಯೂಟ್ಯೂಬ್ ಚಾನೆಲ್ಗಳು ಸುಳ್ಳು ಮಾಹಿತಿ ಹರಡುತ್ತಿವೆ. ಜನರನ್ನು ಯಾಮಾರಿಸುವ ರೀತಿಯಲ್ಲಿ ಥಂಬ್ ಇಮೇಜ್ ರಚಿಸಿ, ಆ ಮೂಲಕ ಲಕ್ಷಾಂತರ ವೀವ್ಸ್ ಪಡೆಯಲು ಹುನ್ನಾರ ನಡೆಸಲಾಗಿದೆ. ಈ ಬಗ್ಗೆ ನಟ ಪ್ರಥಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನಾನು ನೋಡಿದ್ರೂ ನಿರ್ಲಕ್ಷ್ಯ ಮಾಡೋಣ ಅಂತಿದ್ದೆ. ಆದರೆ ಒಂದೇ ದಿನದಲ್ಲಿ 2.7 ಲಕ್ಷ ವೀವ್ಸ್ ಆಗಿದೆ. ವೀವ್ಸ್ ಆಗಲಿ ಮತ್ತು ದುಡ್ಡಾಗಲಿ ಎಂದು ಯೂಟ್ಯೂಬ್ ಚಾನೆಲ್ ಈ ಮಟ್ಟಕ್ಕೆ ಇಳಿದಾಗ ಸ್ವಲ್ಪ ಕಾನೂನಾತ್ಮಕವಾಗಿ ನೋಡಬೇಕಾಗುತ್ತದೆ. ಮೇಘನಾ ರಾಜ್ ಅವರೇ, ನೀವು ಇಂಥ ಒಂದು ಚಾನೆಲ್ ಅನ್ನು ಕಾನೂನಾತ್ಮಕವಾಗಿ ಡಿಲಿಟ್ ಮಾಡಿಸಿದ್ರೆ ಇನ್ನಷ್ಟು ಜನರು ಎಚ್ಚೆತ್ತುಕೊಳ್ಳುತ್ತಾರೆ' ಎಂದು ಪ್ರಥಮ್ ಟ್ವೀಟ್ ಮಾಡಿದ್ದಾರೆ.
ನಟಿ ಮೇಘನಾ ರಾಜ್ ಸರ್ಜಾ ಅವರ ಬದುಕಿನಲ್ಲಿ ಹಲವು ಏರಿಳಿತಗಳಾದವು. ಪತಿ ಚಿರಂಜೀವಿ ಸರ್ಜಾ ಅಗಲಿಕೆಯಿಂದ ಅವರು ಸಾಕಷ್ಟು ನೋವು ಅನುಭವಿಸಬೇಕಾಯಿತು. ಈಗ ಪುತ್ರ ರಾಯನ್ ರಾಜ್ ಸರ್ಜಾನ ಆರೈಕೆಯಲ್ಲಿ ಅವರು ನಗು ಕಂಡುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ನೋವು ನೀಡುವಂತಹ ಹಲವು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚೆಗೆ ರಾಯನ್ ರಾಜ್ ಸರ್ಜಾ ನಾಮಕರಣದ ದಿನವೇ ಮೇಘನಾ ತಾಯಿ ಪ್ರಮೀಳಾ ಜೋಷಾಯ್ ಅವರು ಕೆಲವು ಸುದ್ದಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಅದಕ್ಕೂ ಮೀರಿ, ಮೇಘನಾ ಎರಡನೇ ಮದುವೆ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ವಿಪರ್ಯಾಸ.
****