ಅಣ್ಣಾವ್ರ ಕಸ್ತೂರಿ ನಿವಾಸಕ್ಕೆ ಸುವರ್ಣ ಸಂಭ್ರಮ
ವರನಟ, ಪದ್ಮಭೂಷಣ ಡಾ. ರಾಜ್ ಕುಮಾರ್ ಅಭಿನಯದ ಕನ್ನಡದ ಅದ್ಭುತ ಗೋಲ್ಡನ್ ಸಿನಿಮಾಗಳ ಪೈಕಿ ಒಂದಾದ ‘ಕಸ್ತೂರಿ ನಿವಾಸ’ ಸಿನಿಮಾ ರಿಲೀಸ್ ಆಗಿ ಇವತ್ತಿಗೆ 50 ವರ್ಷ. 1971 ಜನವರಿ 29ನೇ ತಾರೀಖು ತೆರೆಕಂಡಿದ್ದ ಸಿನಿಮಾ ಆಗಿನ ಕಾಲಕ್ಕೆ ಸೂಪರ್ ಡೂಪರ್ ಹಿಟ್ ಆಗಿತ್ತು. ಜೊತೆಗೆ ಈ ಸಿನಿಮಾದ ಆಡಿಸಿ ನೋಡು.. ಬೀಳಿಸಿ ನೋಡು.. ಹಾಡು ಹಾಗೂ ಸಿನಿಮಾದ ರಾಜ್ ಕುಮಾರ್ ಪಾತ್ರ ಇವತ್ತಿಗೂ ಸ್ಫೂರ್ತಿ ತುಂಬುತ್ತೆ.ಈ ಸಿನಿಮಾದಲ್ಲಿ ಡಾ. ರಾಜ್ ಕುಮಾರ್ ಒಬ್ಬ ದುರಂತ ನಾಯಕನ ಪಾತ್ರದಲ್ಲಿ ಮಿಂಚಿದ್ದರೂ, ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸೃಷ್ಟಿಸಿದ ಮೈಲಿಗಲ್ಲು ಒಂದೆರಡಲ್ಲ.

ಕೆಸಿಎನ್ ಗೌಡ್ರು ನಿರ್ಮಾಣ ಮಾಡಿದಂತಹ ಈ ಸಿನಿಮಾವನ್ನ ದೊರೈ ಭಗವಾನ್ ನಿರ್ದೇಶನ ಮಾಡಿದ್ರು. ಈ ಸಿನಿಮಾ ನಂತರ ವರ್ಣಮಯವಾಗಿ ಕೂಡ ತೆರೆಗೆ ಬಂದು ಅದ್ಭುತ ಪ್ರದರ್ಶನ ಕಂಡಿತ್ತು. 50 ವರ್ಷಗಳನ್ನು ಪೂರೈಸಿರುವಂತಹ ಕಸ್ತೂರಿ ನಿವಾಸದ ಸುವರ್ಣ ಸಂಭ್ರಮವನ್ನು ನೊಗ್ ರಾಜ್ ಕುಮಾರ್ ಅಭಿಮಾನಿಗಳ ಸಂಘ ಹಾಗೂ ಡಾಕ್ಟರ್ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಹಾಗೂ ರಾಜವಂಶದ ಅಭಿಮಾನಿಗಳು ಸಂಭ್ರಮಿಸ್ತಾ ಇದ್ದಾರೆ.