29.4 C
Bengaluru
Sunday, February 5, 2023
spot_img

ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ಮತ್ತು ತಾರಾ ಅನುರಾಧಾ ಅವರಿಗೆ ವಿಶೇಷ ಪ್ರಶಸ್ತಿ

ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಿವಂಗತ ಡಿ.ವಿ.ಸುಧೀಂದ್ರ ಅವರಿಂದ ಸ್ಥಾಪಿಸಲ್ಪಟ್ಟ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು ಕಳೆದ 47 ವರ್ಷಗಳಿಂದ ಕನ್ನಡ ಚಿತ್ರರಂಗ ಮತ್ತು ಮಾಧ್ಯಮದ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತಾ ಬಂದಿದೆ. ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಮೂಲಕ ಕಳೆದ 20 ವರ್ಷಗಳಿಂದ ಚಲನಚಿತ್ರ ಪತ್ರಕರ್ತರಿಗೆ ಮತ್ತು ಚಿತ್ರರಂಗದ ಗಣ್ಯರಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಸುಧೀಂದ್ರ ಅವರ ನಂತರ ಸುಧೀಂದ್ರ ವೆಂಕಟೇಶ್ ಈ ಸಂಪ್ರದಾಯವನ್ನು ಮುಂದುವರೆಸಿದ್ದು, 2022ನೇ ಸಾಲಿನ ವಾರ್ಷಿಕ 11 ಪ್ರಶಸ್ತಿಗಳನ್ನು ನೀಡುವುದರ ಜೊತೆಗೆ ಈ ಬಾರಿ ಇನ್ನೂ ಮೂರು ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದ್ದಾರೆ.

2022ರಲ್ಲಿ ಇಡೀ ಜಗತ್ತೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರಗಳೆಂದರೆ ಅದು ‘ಕೆಜಿಎಫ್ 2’ ಮತ್ತು ‘ಕಾಂತಾರ’. ಈ ಎರಡೂ ಚಿತ್ರಗಳನ್ನು ನಿರ್ಮಿಸಿ, ಕನ್ನಡ ಚಿತ್ರರಂಗದ ಕೀರ್ತಿಪತಾಕೆಯನ್ನು ಹಾರಿಸಿದ ಹೊಂಬಾಳೆ ಫಿಲಂಸ್ನ ಶ್ರೀ ವಿಜಯ್ ಕಿರಗಂದೂರು ಅವರಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯಿಂದ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.


ಕಳೆದ ವರ್ಷ ಬಿಡುಗಡೆಯಾದ ‘ಗಂಧದ ಗುಡಿ’ಯನ್ನು ಒಂದು ಚಿತ್ರ ಎನ್ನುವುದಕ್ಕಿಂತ ಅದ್ಭುತವಾದ ಅನುಭವ ಎಂದರೆ ತಪ್ಪಿಲ್ಲ. ಕನ್ನಡ ನಾಡಿನ ಪ್ರಾಕೃತಿಕ ಸಂಪತ್ತನ್ನು ತಮ್ಮ ಕಣ್ಣುಗಳ ಮೂಲಕ ಕನ್ನಡಿಗರಿಗೆ ತೋರಿಸಿದವರು ದಿವಂಗತ ಪುನೀತ್ ರಾಜಕುಮಾರ್. ಇಂಥದ್ದೊಂದು ಅಪೂರ್ವವಾದ ಅನುಭವವನ್ನು ಕಟ್ಟಿಕೊಟ್ಟ ಪುನೀತ್ ಮತ್ತು ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿದ ನಿರ್ಮಾಪಕಿ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಈ ಪ್ರಶಸ್ತಿ ಸಂದಾಯವಾಗಲಿದೆ.

ಇನ್ನು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ಶ್ರೀಮತಿ ತಾರಾ ಅನೂರಾಧ ಅವರ ಅಭಿನಯ, ಪಾತ್ರಗಳು ಮತ್ತು ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆಯನ್ನು ಸ್ಮರಿಸಿ, ಅವರಿಗೂ ಈ ಬಾರಿ ವಿಶೇಷ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 47ನೇ ವಾರ್ಷಿಕೋತ್ಸವ ಹಾಗೂ 21 ಮತ್ತು 22ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಂಸ್ಥೆಯ ಸ್ಥಾಪಕರಾದ ಶ್ರೀ ಡಿ.ವಿ. ಸುಧೀಂದ್ರ ಅವರ ಜನ್ಮದಿನದಂದು (ಜನವರಿ 25) ಚಾಮರಾಜಪೇಟೆಯ ಕನ್ನಡ ಚಲನಚಿತ್ರ ಕಲಾವಿದರ ಸಂಘದಲ್ಲಿ ಸಂಜೆ 5ಕ್ಕೆ ಆಯೋಜಿಸಲಾಗಿದೆ.

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles