ಪದವಿ ಪೂರ್ವ ಸಿನಿಮಾವು ತನ್ನ ಒಳ್ಳೆಯ ಕತೆ, ನಿರ್ದೇಶನ, ಛಾಯಾಗ್ರಹಣ, ಮಾತುಗಳು, ಹಾಡುಗಳು ಮತ್ತು ನಟನೆಗಳಿಂದ ಹದಿಹರೆಯದ ವಯಸ್ಸಿನ ಹುಡುಗ ಹುಡುಗಿಯರ ಸ್ನೇಹ ಮತ್ತು ಪ್ರೀತಿಯ ಭಾವನೆಗಳನ್ನು ಚೆನ್ನಾಗಿ ಕಟ್ಟಿಕೊಟ್ಟು ಎಲ್ಲರ ಮನ ಮುಟ್ಟಿ ಮೂರನೇ ವಾರದಲ್ಲಿ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಮುನ್ನುಗುತ್ತಿರುವ ಈ ಹೊತ್ತಿನಲ್ಲಿ ಸುದ್ದಿಯೊಂದು ತಂಡದ ಖುಶಿಯನ್ನು ಹೆಚ್ಚು ಮಾಡಿದೆ.
ಪದವಿ ಪೂರ್ವ ಸಿನಿಮಾದ ಕನ್ನಡ ಭಾಷೆಯ ಟಿವಿ(ಸ್ಯಾಟಲೈಟ್) ಮತ್ತು ಡಿಜಿಟಲ್(ಓಟಿಟಿ) ಹಕ್ಕುಗಳನ್ನು ಉದಯ ಟಿವಿ ಮತ್ತು ಸನ್ನೆಕ್ಸ್ಟ್ ಗಳ ಒಡೆತನದ ಹೆಸರಾಂತ ಸನ್ ನೆಟ್ವರ್ಕ್ಸ್ ಭಾರೀ ಮೊತ್ತಕ್ಕೆ ಕೊಂಡುಕೊಂಡಿದೆ. ಕನ್ನಡ ಬಿಟ್ಟು ಬೇರೆ ಭಾಷೆಯ ಡಬ್ಬಿಂಗ್ ಮತ್ತು ರೀಮೇಕ್ ಹಕ್ಕುಗಳು ತಂಡದೊಂದಿಗೆ ಇವೆ.

ನಾಯಕನಾಗಿ ಪೃಥ್ವಿ ಶಾಮನೂರ್, ನಾಯಕಿಯರಾಗಿ ಅಂಜಲಿ ಅನಿಶ್ ಮತ್ತು ಯಶ ಶಿವಕುಮಾರ್ ಅವರುಗಳ ಜೊತೆಗೆ ವಿಶೇಷ ಪಾತ್ರಗಳಲ್ಲಿ ಶರತ್ ಲೋಹಿತಾಶ್ವ, ರಂಗಾಯಣ ರಘು, ಯೋಗರಾಜ್ ಭಟ್, ಅದಿತಿ ಪ್ರಭುದೇವ, ದಿವ್ಯ ಉರುಡುಗ, ಪ್ರಭು ಮುಂದ್ಕುರ್, ಶ್ರೀ ಮಹಾದೇವ್ ಅವರುಗಳಿದ್ದಾರೆ.
ಯೋಗರಾಜ್ ಸಿನಿಮಾಸ್ ಮತ್ತು ರವಿ ಶಾಮನೂರ್ ಫಿಲ್ಮ್ಸ್ಜಂಟಿಯಾಗಿ ನಿರ್ಮಿಸಿರುವ, ಹರಿಪ್ರಸಾದ್ ಜಯಣ್ಣ ಅವರು ಚೊಚ್ಚಲ ನಿರ್ದೇಶನದ ಚಿತ್ರ ಪದವಿ ಪೂರ್ವ. ಮಾಧ್ಯಮ ಮತ್ತು ನೋಡುಗರೆಲ್ಲರಿಂದ ಭಾರೀ ಮೆಚ್ಚುಗೆ ಗಳಿಸಿ ರಾಜ್ಯದ ಎಲ್ಲೆಡೆ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ.
ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಯೋಗರಾಜ್ ಭಟ್ ಅವರ ಸಾಲುಗಳಲ್ಲಿ ಇಂಪಾದ ಹಾಡುಗಳಿವೆ. ಸಂತೋಷ್ ರೈ ಪತಾಜೆ ಅವರ ಛಾಯಾಗ್ರಹಣ ಮತ್ತು ಮಧು ತುಂಬಕೆರೆಯವರ ಸಂಕಲನದಲ್ಲಿ ಸಿನಿಮಾ ಅಚ್ಚುಕಟ್ಟಾಗಿ ನೋಡುಗರ ಮನ ಮುಟ್ಟುತ್ತಿದೆ. ಈ ಮೂಲಕ ತನ್ನ ಪ್ರಾಮಾಣಿಕತೆ ಮತ್ತು ಪರಿಶ್ರಮದಿಂದ ಸ್ಯಾಂಡಲ್ವುಡ್ನಲ್ಲಿ ಹೊಸ ಸಿನಿಮಾ ತಂಡವೊಂದು ಗಟ್ಟಿಯಾಗಿ ನೆಲೆಯೂರಿದೆ.