ರಾಜು ಹುಟ್ಟಿದ್ ಹಬ್ಬನಾ? ಯಾವ್ ರಾಜು ? ರಾಜು ಅಂತ ಯಾರಪ್ಪಾ ಇದ್ದಾರೆ ಅಂತ ಯೋಚಿಸ್ತಿದ್ದೀರಾ? ಸರಿ ಜಾಸ್ತಿ ತಲೆಗೆ ಹುಳ ಬಿಡ್ಕೋಬೇಡಿ ಹೇಳ್ತಿನಿ. ಸ್ಯಾಂಡಲ್ ವುಡ್ ನಲ್ಲಿ ರಾಜು ಎಂದೇ ಗುರುತಿಸಿಕೊಂಡಿರೋ, ರಾಜು ಎಂಬ ಶೀರ್ಷಿಕೆಯಿಂದಲೇ ಫೇಮಸ್ ಆಗಿರುವಂತ ನಮ್ಮ ಗುರುನಂದನ್.
ಫಸ್ಟ್ ರ್ಯಾಂಕ್ ರಾಜು ಮೂಲಕ ಸ್ಯಾಂಡಲ್ವುಡ್ ಅಂಗಳದಲ್ಲಿ ಮಿಂಚು ಹರಿಸಿದ ನಟ ಗುರುನಂದನ್. ರಾಜು ಕನ್ನಡ ಮೀಡಿಯಂ ಮೂಲಕ ಪ್ರೇಕ್ಷಕ ಪ್ರಭುಗಳಿಗೆ ಇನ್ನಷ್ಟು ಹತ್ತಿರವಾದರು. ಮಿಸ್ಸಿಂಗ್ ಬಾಯ್ ಸಿನಿಮಾದಲ್ಲಿ ತಮ್ಮ ಅಭಿನಯದ ಮೂಲಕ ಚಂದನವನದ ಭರವಸೆಯ ಹಾಗೂ ಪ್ರತಿಭಾನ್ವಿತ ನಟರಲ್ಲೊಬ್ಬರಾಗಿ ಛಾಪು ಮೂಡಿಸಿದ್ದಾರೆ. ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸಿದ್ದರು ಕೂಡ ಪ್ರತಿ ಸಿನಿಮಾದಲ್ಲೂ ಗೆಲುವನ್ನು ತಮ್ಮದಾಗಿಸಿಕೊಂಡಿರುವ ಲಕ್ಕಿ ಬಾಯ್ ಅಂದ್ರೆ ತಪ್ಪಾಗೋದಿಲ್ಲ. ಫಸ್ಟ್ ರ್ಯಾಂಕ್ ರಾಜು, ರಾಜು ಕನ್ನಡ ಮೀಡಿಯಂ ಇದೀಗ ರಾಜು ಜೇಮ್ಸ್ ಬಾಂಡ್ ಅವತಾರ ತಾಳಿರುವ ಗುರುನಂದನ್ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.
ಕಾಮಿಡಿ ಡ್ರಾಮ ಸಬ್ಜೆಕ್ಟ್ ಒಳಗೊಂಡಿರುವ ಈ ಚಿತ್ರದಲ್ಲಿ ಗುರುನಂದನ್ ಜೋಡಿಯಾಗಿ ಮೃದುಲಾ ತೆರೆ ಹಂಚಿಕೊಂಡಿದ್ದಾರೆ. ಬಹಳ ನಿರೀಕ್ಷೆ, ಭರವಸೆಯೊಂದಿಗೆ ಮೂಡಿ ಬರುತ್ತಿರುವ ಸಿನಿಮಾದಲ್ಲಿ ಚಂದನವನದ ಖ್ಯಾತ ತಾರೆಯರ ಕಲಾಬಳಗವಿದೆ. ಸಾಧು ಕೋಕಿಲ, ಜೈ ಜಗದೀಶ್, ರವಿಶಂಕರ್, ಚಿಕ್ಕಣ್ಣ, ಅಚ್ಯುತ್ ಕುಮಾರ್, ತಬಲ ನಾಣಿ, ಮಂಜುನಾಥ್ ಹೆಗ್ಡೆ, ವಿಜಯ್ ಚೆಂದೂರ್ ಒಳಗೊಂಡ ಕಲರ್ ಫುಲ್ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು ಸದ್ಯದಲ್ಲೇ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ನೀಡಲಿದೆ ರಾಜು ಜೇಮ್ಸ್ ಬಾಂಡ್ ಚಿತ್ರತಂಡ.
ಗುರುನಂದನ್ ಹುಟ್ಟುಹಬ್ಬದ ಪ್ರಯುಕ್ತ ರಾಜು ಜೇಮ್ಸ್ ಬಾಂಡ್ ಸಿನಿಮಾ ತಂಡ ಬರ್ತ್ಡೇ ಟೀಸರ್ ಬಿಡುಗಡೆ ಮಾಡಿದೆ. ಅಮೆರಿಕ ಕನ್ನಡಿಗರು ಈ ಬರ್ತ್ಡೇ ಟೀಸರ್ ಬಿಡುಗಡೆ ಮಾಡುವ ಮೂಲಕ ಗುರುನಂದನ್ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದು, ಚಿತ್ರತಂಡಕ್ಕೂ ಶುಭ ಹಾರೈಸಿದ್ದಾರೆ. ಟೀಸರ್ ಪ್ರಾಮಿಸಿಂಗ್ ಆಗಿ ಮೂಡಿ ಬಂದಿದ್ದು ಗುರುನಂದನ್ ರಾಯಲ್ ಬಾಂಡ್ ಅವತಾರ ನೋಡಿ ಅವರ ಅಭಿಮಾನಿ ಬಳಗ ಹಾಗೂ ಚಿತ್ರಪ್ರೇಮಿಗಳು ಥ್ರಿಲ್ ಆಗಿದ್ದಾರೆ.
****