ಕೋಟಿ ನಿರ್ಮಾಪಕ ರಾಮು ಅವರು ಕೊರೊನಾ ದಿಂದ ತೀರಿಕೊಂಡರು ಆವರು ನಿರ್ಮಿಸಿದ ಕೊನೇ ಸಿನಿಮಾ ‘ಅರ್ಜುನ್ ಗೌಡ’ ಡಿ.31 ರಂದು ಬಿಡುಗಡೆ ಆಗಲಿದೆ. ಪ್ರಜ್ವಲ್ ದೇವರಾಜ್ ಮತ್ತು ಪ್ರಿಯಾಂಕಾ ತಿಮ್ಮೇಶ್ ನಟಿಸಿರುವ ಆ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲಾಗಿದೆ. ರಾಮು ಪತ್ನಿ, ನಟಿ ಮಾಲಾಶ್ರೀ ಅವರು ‘ಅರ್ಜುನ್ ಗೌಡ’ ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ. ಆ ಮೂಲಕ ಪತಿಯ ಕೆಲಸವನ್ನು ಅವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಮಾಲಾಶ್ರೀಗೆ ಬೆಂಬಲ ನೀಡಲು ಕನ್ನಡ ಚಿತ್ರರಂಗದ ಅನೇಕ ಸ್ಟಾರ್ ಕಲಾವಿದರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಕೋಟಿ ನಿರ್ಮಾಪಕ ರಾಮು ಅಗಲಿದ ಬಳಿಕ ಇದೇ ಮೊದಲ ಬಾರಿಗೆ ಮಾಲಾಶ್ರೀ ವೇದಿಕೆ ಮೇಲೆ ಕಾಣಿಸಿಕೊಂಡಿದ್ದರು. ನಿರ್ಮಾಪಕ ರಾಮು ನಿರ್ಮಿಸಿದ್ದ ಕೊನೆಯ ಸಿನಿಮಾ ‘ಅರ್ಜುನ್ ಗೌಡ’ ಚಿತ್ರದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಕನಸಿನ ರಾಣಿ ಮಾಲಾಶ್ರೀ ಭಾಗವಹಿಸಿದ್ದರು. ರಾಮು ನೆನಪಿಗಾಗಿ, ಅವರ ಬ್ಯಾನರ್ನಲ್ಲಿ ನಟಿಸಿದ ಕನ್ನಡದ ಎಲ್ಲಾ ನಟರೂ ಒಂದೇ ವೇದಿಕೆ ಮೇಲೆ ಸೇರಿದ್ದರು.
ಕ್ರೇಜಿಸ್ಟಾರ್ ರವಿಚಂದ್ರನ್, ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ರಿಯಲ್ಸ್ಟಾರ್ ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್, ಪ್ರಜ್ವಲ್ ದೇವರಾಜ್, ದೇವರಾಜ್, ಸಾಧುಕೋಕಿಲಾ ಸೇರಿದಂತೆ ಕನ್ನಡ ಚಿತ್ರರಂಗದ ದಿಗ್ಗಜರು ಒಂದೇ ವೇದಿಕೆ ಮೇಲೆ ಜೊತೆಯಾಗಿದ್ದರು. ಈ ವೇಳೆ ರಾಮು ನಿರ್ಮಿಸಿದ ಆರು ಸಿನಿಮಾಗಳಲ್ಲಿ ನಟಿಸಿರುವ ಶಿವರಾಜ್ಕುಮಾರ್ ‘ಕನ್ನಡ ಚಿತ್ರರಂಗ ಉದ್ದಾರ ಆಗಬೇಕು ಎಂದರೆ ರಾಮು ಅವರಂಥ ನಿರ್ಮಾಪಕರು ನೂರು ವರ್ಷ ಬದುಕಬೇಕಿತ್ತು. ಅವರ ನಿರ್ಮಾಣದಲ್ಲಿ ನಾನು 6 ಸಿನಿಮಾ ಮಾಡಿದ್ದೇನೆ. ಮಾಲಾಶ್ರೀ ಅವರು ಸಿನಿಮಾ ನಿರ್ಮಾಣವನ್ನು ಮುಂದುವರಿಸಬೇಕು. ನಾವು ಜೊತೆಯಲ್ಲಿ ಇರುತ್ತೇವೆ’ ಎಂದು ಹೇಳಿದರು.ಮತ್ತೊಂದು ಸಿನಿಮಾದಲ್ಲಿ ನಟಿಸುವುದಾಗಿ ವೇದಿಕೆ ಮೇಲೆನೇ ಅನೌನ್ಸ್ ಮಾಡಿದರು.
ಮಾಲಾಶ್ರೀ ಮತ್ತು ರಾಮು ಬಗ್ಗೆ ಎಷ್ಟೇ ಮಾತಾಡಿದರೂ ಮುಗಿಯಲ್ಲ’ ಎನ್ನುತ್ತ ಮಾತು ಆರಂಭಿಸಿದರು ಉಪೇಂದ್ರ. ‘ರಾಮು ಅವರ ಬ್ಯಾನರ್ ಎಂದರೆ ಒಂದು ಆಕರ್ಷಣೆ ಇರುತ್ತಿತ್ತು. ರಾಮು ಕೋಟಿ ನಿರ್ಮಾಪಕ ಆಗಿದ್ದರು. ಮಾಲಾಶ್ರೀ ಶತಕೋಟಿ ನಿರ್ಮಾಪಕಿ ಆಗಬೇಕು. 100 ಕೋಟಿ ರೂ. ಬಜೆಟ್ ಸಿನಿಮಾ ನೀವು ಮಾಡಬೇಕು. ಯಾಕೆಂದರೆ, ನಾವೆಲ್ಲ ನಿಮ್ಮ ಜೊತೆ ಇದ್ದೇವೆ’ ಎಂದು ಮಾಲಾಶ್ರೀಗೆ ಉಪೇಂದ್ರ ಭರವಸೆ ನೀಡಿದರು.
ಮಾಲಾಶ್ರೀ ಮತ್ತು ರವಿಚಂದ್ರನ್ ಅವರದ್ದು ಹಲವು ವರ್ಷಗಳ ಸ್ನೇಹ. ‘ರಾಮು ಹೆಚ್ಚು ಮಾತನಾಡುತ್ತ ಇರಲಿಲ್ಲ. ಅವರ ಕೆಲಸವೇ ಮಾತಾಡುತ್ತಿತ್ತು. ಮಾಲಾಶ್ರೀ ಅವರು ನನಗಾಗಿ ‘ರಾಮಾಚಾರಿ’ ಸಿನಿಮಾದಲ್ಲಿ ನಟಿಸುವ ಮೂಲಕ ಸಹಾಯ ಮಾಡಿದ್ದರು. ನಾನು ಆ ಋಣ ತೀರಿಸಲು ‘ಮಲ್ಲ’ ಸಿನಿಮಾ ಕಾರಣ ಆಯ್ತು’ ಎಂದರು ರವಿಚಂದ್ರನ್.
****