ಅಪ್ಪು ನೇತ್ರದಾನ ಮಾಡಿದ್ದು ರಾಜ್ಯಾದ್ಯಂತ ಅಸಂಖ್ಯಾತ ಅಭಿಮಾನಿಗಳಿಗೆ ಪ್ರೇರಣೆ ಆಗಿದೆ. ಇದರಿಂದಲೇ ರಾಜ್ಯದಲ್ಲಿ ನೇತ್ರದಾನ ದಾಖಲೆ ಪ್ರಮಾಣದಲ್ಲಿ ನಡೆಯುತ್ತಿದೆ. ಪುನೀತ್ ನಿಧನರಾದ ನಂತರ ರಾಜ್ಯದಲ್ಲಿ ನೇತ್ರದಾನ ಪ್ರಮಾಣ ಹೆಚ್ಚಾಗಿರುವುದನ್ನು ಅಂಕಿಅಂಶದ ಸಮೇತ ನಾರಾಯಣ ನೇತ್ರಾಲಯದ ಡಾ.ಭುಜಂಗ ಶೆಟ್ಟಿ ವಿವರಿಸಿದ್ದಾರೆ.
‘‘ಪುನೀತ್ ಕಣ್ಣು ನೀಡಿದ ನಂತರ ಸುಮಾರು 440ಕ್ಕೂ ಹೆಚ್ಚು ಜನರು ನೇತ್ರದಾನ ಮಾಡಿದ್ದಾರೆ. ಇದು ದೊಡ್ಡ ದಾಖಲೆ. ಯಾವತ್ತೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ನೇತ್ರದಾನಕ್ಕೆ ಮುಂದಾಗಿರಲಿಲ್ಲ. ಅಪ್ಪು ನೇತ್ರದಾನದಲ್ಲಿ ಬ್ರಾಂಡ್ ಅಂಬಾಸಿಡರ್ ಆದರು’’ ಎಂದಿದ್ದಾರೆ ಡಾ.ಭುಜಂಗ ಶೆಟ್ಟಿ.
ರಾಜ್ಯದಲ್ಲಿ ನೇತ್ರದಾನಕ್ಕೆ ಹೆಸರು ನೋಂದಾಯಿಸಿದವರ ಪಟ್ಟಿಯೂ ದೊಡ್ಡದಿದೆ. ಇದುವರೆಗೆ ಸುಮಾರು 12,000ಕ್ಕೂ ಅಧಿಕ ಜನರು ನೇತ್ರದಾನಕ್ಕೆ ಹೆಸರು ನೋಂದಾಯಿಸಿದ್ದಾರೆ. ಜತೆಗೆ ಕರೆ ಮಾಡಿ ನೇತ್ರದಾನ ಮಅಡಬೇಕು. ಹೆಸರು ನೋಂದಾಯಿಸುವುದು ಹೇಗೆ ಎಂಬ ಪ್ರಶ್ನೆಯನ್ನೂ ಕೇಳುತ್ತಿದ್ದಾರೆ. ಇದಕ್ಕೆಲ್ಲಾ ಉತ್ತರವೆಂಬಂತೆ ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳಲು ಸುಲಭದ ಮಾರ್ಗವನ್ನು ಇಂದು ಉದ್ಘಾಟಿಸಲಾಗಿದೆ.
ನೇತ್ರದಾನದ ನೋಂದಣಿಗೆಂದೇ ವಿಶೇಷ ಫೋನ್ ನಂಬರ್ ಸ್ಥಾಪಿಸಲಾಗಿದೆ. 8884018800 ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿದರೆ, ನೇತ್ರದಾನಕ್ಕೆ ನೋಂದಾಯಿಸಲು ಅಗತ್ಯವಾದ ಅರ್ಜಿಯ ಲಿಂಕ್ ಸಿಗಲಿದೆ. ಈ ಕುರಿತು ರಾಘವೇಂದ್ರ ರಾಜ್ಕುಮಾರ್ ಮಾಹಿತಿ ಹಂಚಿಕೊಂಡಿದ್ದು, ಪುನೀತ್ ನಿಧನದ ಬಳಿಕ ನೇತ್ರದಾನದ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಇದೀಗ ಹೆಸರು ನೋಂದಾಯಿಸುವುದು ಮತ್ತಷ್ಟು ಸುಲಭವಾಗಿದೆ ಎಂದಿದ್ದಾರೆ.
****