ನಿಖಿಲ್ ಕುಮಾರಸ್ವಾಮಿ ನಟಿಸಿರುವ ‘ರೈಡರ್’ ಸಿನಿಮಾ ಬಿಡುಗಡೆ ಆಗಿ ಮೂರೇ ದಿನಕ್ಕೆ ಆಘಾತವೊಂದನ್ನು ಎದುರಿಸಿದೆ. ಸಿನಿಮಾ ರಾಜ್ಯದಾದ್ಯಂತ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ವೇಳೆಯಲ್ಲಿಯೇ ಸಿನಿಮಾದ ಪೈರಸಿ ಕಾಪಿ ಹೊರಬಂದಿದೆ. ಈ ಕುರಿತು ಚಿತ್ರದ ಹೀರೋ ನಿಖಿಲ್ ಕುಮಾರಸ್ವಾಮಿ ಮಾಧ್ಯಮದ ಎದುರು ಬೇಸರ ವ್ಯಕ್ತಪಡಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಸಿನಿಮಾದ ಪ್ರಚಾರಕ್ಕಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದು, ನಿನ್ನೆ ಮೈಸೂರಿನ ಲಿಡೋ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ಸಮಯ ಸಿನಿಮಾದ ಪೈರಸಿ ಕಾಪಿ ಹೊರಬಿದ್ದಿರುವ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದರು.
”ನಮ್ಮ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಿಸಿಕೊಳ್ತಾ ಇದೆ. ಆದರೆ ಇದೀಗ ಇಡೀ ತಂಡಕ್ಕೆ ದುಃಖ ಆಗುವ ಘಟನೆ ನಡೆದಿದೆ. ಇಂದು ಲಹರಿ ಸಂಸ್ಥೆಯ ವೇಣು ಅವರು ಕರೆ ಮಾಡಿ, ‘ರೈಡರ್’ ಸಿನಿಮಾದ ಪೈರಸಿ ಆಗಿದೆ, ತಮಿಳು ರಾಕರ್ಸ್ ವೆಬ್‌ಸೈಟ್‌ನಲ್ಲಿ ಸಿನಿಮಾ ಇದೆ ಎಂದರು. ತುಂಬ ಕಷ್ಟ ಪಟ್ಟು, ಎರಡು ವರ್ಷ ಶ್ರಮ ಹಾಕಿ ‘ರೈಡರ್’ ಸಿನಿಮಾ ಮಾಡಿದ್ದೇವೆ. ಸಿನಿಮಾದ ಒಬ್ಬ ನಿರ್ಮಾಪಕರಾದ ಸಂತೋಶ್ ಅವರು ಬಡ್ಡಿಗೆ ಹಣ ತಂದು ಸಿನಿಮಾದ ಮೇಲೆ ಹಾಕಿದ್ದಾರೆ” ಎಂದರು ನಿಖಿಲ್.
****