ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಡಿಸೆಂಬರ್ 24 ರಂದು ರಾಜಾದ್ಯಂತ ಅದ್ದೂರಿಯಾಗಿ ಬಿಡುಗಡೆ ಆಗಿದ್ದು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಸದಾ ರಾಜಕೀಯ ಕೆಲಸಗಳಲ್ಲಿ ಬ್ಯುಸಿ ಇರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಗನ ಸಿನಿಮಾ ರೈಡರ್ ವೀಕ್ಷಿಸಿ ಮೆಚ್ಚುಗೆ ವ್ಯೆಕ್ತಪಡಿಸಿದ್ದಾರೆ.
ನಿಖಿಲ್ ಕೆಲವು ವರ್ಷಗಳಿಂದಲೂ ರಾಜಕೀಯ ಮತ್ತು ಸಿನಿಮಾ ಎರಡರಲ್ಲೂ ಬ್ಯುಸಿ ಇರುತ್ತಾರೆ, ಈ ಕಾರಣಕ್ಕೆ ಅವರ ತಂದೆ ಕುಮಾರಸ್ವಾಮಿ ತಮ್ಮ ಮಗ ನಿಖಿಲ್ ಸಿನಿಮಾ ಸೇವೆ ಮಾಡಲಿ ಎಂಬ ಆಸೆ ವ್ಯಕ್ತಪಡಿಸಿದ್ದಾರೆ.
ನಿನ್ನೆ(ಡಿಸೆಂಬರ್ 25) ‘ರೈಡರ್’ ಸಿನಿಮಾದ ವಿಶೇಷ ಪ್ರದರ್ಶನ ಆಯೋಜನೆ ಮಾಡಲಾಗಿತ್ತು. ಈ ವೇಳೆ ಪುತ್ರ ನಿಖಿಲ್ ಅಭಿನಯದ ಸಿನಿಮಾ ನೋಡಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕನ್ನಡ ಚಿತ್ರರಂಗಕ್ಕೆ ನಟರು ಬೇಕು. ತಮ್ಮ ಪುತ್ರ ಆ ಅವಶ್ಯಕತೆಯನ್ನು ನೀಗಿಸಲಿ ಎಂದಿದ್ದಾರೆ. “ಕನ್ನಡ ಚಿತ್ರರಂಗಕ್ಕೆ ನಟರ ಅವಶ್ಯಕತೆಯಿದೆ. ಹೀಗಾಗಿ ರಾಜಕೀಯಕ್ಕಿಂತ ಸಿನಿಮಾಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಲಿ. ನಟರ ಕೊರತೆಯನ್ನು ನಿಖಿಲ್ ಕುಮಾರ್ ನೀಗಿಸಲಿ ಎಂಬುದು ದೇವರ ಇಚ್ಛೆ ಎಂದು ಭಾವಿಸಿದ್ದೇನೆ.” ಎಂದು ‘ರೈಡರ್’ ಸಿನಿಮಾ ವೀಕ್ಷಿಸಿದ ಬಳಿಕ ತಿಳಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಕಳೆದ ಎರಡು ವರ್ಷಗಳಿಂದ ರಾಜಕಾರಣದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಕಡಿಮೆ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಹೀಗಾಗಿ ಕನ್ನಡದಲ್ಲಿಯೇ ಹೆಚ್ಚು ಸೇವೆ ಮಾಡಲಿ ಎಂದು ಅಭಿಪ್ರಾಯ ಪಟ್ಟಿದ್ದಾರೆ. “ಮೂರನೇ ಚಿತ್ರದಲ್ಲಿಯೇ ನಟನಾಗುವ ಎಲ್ಲಾ ಅರ್ಹತೆಯಿದೆ ಎಂಬುದನ್ನು ನಿಖಿಲ್ ತೋರಿಸಿದ್ದಾರೆ. ರಾಜಕಾರಣದ ಹಿನ್ನೆಲೆಯಲ್ಲಿ ಮೊದಲು ಸಿನಿಮಾದ ಬಗ್ಗೆ ಗಮನ ನೀಡಿರಲಿಲ್ಲ. ಈ ಸಿನಿಮಾ ನೋಡಿದಾಗ, ಅವರು ರಾಜಕಾರಣಕ್ಕಿಂತ ಸಿನಿಮಾದಲ್ಲಿ ಇನ್ನೂ ಹೆಚ್ಚು ಸೇವೆ ಮಾಡಲಿ ಎಂಬ ಭಾವನೆಯನ್ನು ವ್ಯಕ್ತಪಡಿಸುತ್ತೇನೆ.” ಎಂದಿದ್ದಾರೆ.
****