ರಿಯಲ್ ಸ್ಟಾರ್’ ಉಪೇಂದ್ರ ಅಭಿನಯದ ‘ಕಬ್ಜ’ ಚಿತ್ರದಲ್ಲಿ ‘ಕಿಚ್ಚ’ ಸುದೀಪ್ ಅವರು ಒಂದು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿತ್ತು. ಇದೀಗ ಚಿತ್ರದಲ್ಲಿ ಅವರ ಲುಕ್ ಹೇಗಿರಲಿದೆ ಎಂಬ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಹೌದು, ‘ಕೆಂಪೇಗೌಡ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಂತೆ ಈ ಬಾರಿಯೂ ಅವರು ಡಿಫರೆಂಟ್ ಆಗಿ ಮತ್ತೊಂದು ವಿಶೇಷ ಲುಕ್‌ನಲ್ಲಿ ‘ಕಬ್ಜ’ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡಿ.15ರಂದು ಶೂಟಿಂಗ್ ಕೂಡ ಶುರುವಾಗಿದ್ದು, ಸುದೀಪ್ ಚಿತ್ರತಂಡ ಸೇರಿಕೊಂಡಿದ್ದಾರೆ.
ಫೋಟೋ ಹಂಚಿಕೊಂಡ ಕಿಚ್ಚ
ಭಾರ್ಗವ್ ಭಕ್ಷಿ ಪಾತ್ರದ ಲುಕ್ ಹೇಗಿರಲಿದೆ ಎಂಬುದಕ್ಕೆ ಸಾಕ್ಷಿಯಾಗಿ ಕಿಚ್ಚ ಸುದೀಪ್ ಈ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ‘ಕಬ್ಜ’ ಟೀಮ್‌ಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ‘ಕಬ್ಜ’ದಲ್ಲಿ ಭಾರ್ಗವ್ ಭಕ್ಷಿ ಎಂಬ ಖಡಕ್ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಕಿಚ್ಚ ಸುದೀಪ್ ಬಣ್ಣ ಹಚ್ಚಿದ್ದಾರೆ. ಅಂಡರ್‌ವರ್ಲ್ಡ್ ಕುರಿತ ಸಿನಿಮಾ ‘ಕಬ್ಜ’ದಲ್ಲಿ ಉಪೇಂದ್ರ ಡಾನ್ ಆಗಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಆರ್. ಚಂದ್ರು ನಿರ್ಮಿಸಿ, ನಿರ್ದೇಶನ ಮಾಡುತ್ತಿರುವ ‘ಕಬ್ಜ’ ಚಿತ್ರವು ಪ್ಯಾನ್ ಇಂಡಿಯಾ ಮಾದರಿಯಲ್ಲಿ ನಿರ್ಮಾಣವಾಗಲಿದೆ. ಚಿತ್ರಕ್ಕಾಗಿ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಅದ್ದೂರಿ ಸೆಟ್ ಹಾಕಿ ಶೂಟಿಂಗ್ ಮಾಡಲಾಗಿದೆ. ಅಲ್ಲದೆ, ಈ ಸಿನಿಮಾ ಏಳು ಭಾಷೆಗಳಲ್ಲಿ ತೆರೆಗೆ ಬರಲಿದೆ. ಮೂಲಗಳ ಪ್ರಕಾರ, ಕನ್ನಡ, ತೆಲುಗು, ತಮಿಳು ಭಾಷೆಗಳಿಗೆ ಏಕಕಾಲದಲ್ಲಿ ಶೂಟಿಂಗ್ ಮಾಡಿ, ಮಿಕ್ಕ ಭಾಷೆಗಳಿಗೆ ಡಬ್ ಮಾಡುವ ಸಾಧ್ಯತೆಗಳಿವೆ. ರವಿ ಬಸ್ರೂರು ಸಂಗೀತ ನೀಡುತ್ತಿದ್ದಾರೆ.
****